ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ 68 ಶತಕೋಟಿ ಡಾಲರ್ ಹೂಡಿಕೆ: ಜಪಾನ್
ಪ್ರಧಾನಿ ನರೇಂದ್ರ ಮೋದಿ | ಜಪಾನ್ ಪ್ರಧಾನಿ ಶಿಗೆರು ಇಷಿಬಾ (PC :hindustantimes)
ಹೊಸದಿಲ್ಲಿ: ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ ಖಾಸಗಿ ಹೂಡಿಕೆ ಮೂಲಕ 10 ಟ್ರಿಲಿಯನ್ ಯೆನ್ (68 ಶತಕೋಟಿ ಡಾಲರ್) ಹೂಡಿಕೆ ಮಾಡುವುದಾಗಿ ಜಪಾನ್ ಭರವಸೆ ನೀಡಿದೆ.
ಜಪಾನ್‍ಗೆ ಭೇಟಿ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಗೆರು ಇಷಿಬಾ ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ಮತ್ತಷ್ಟು ಆಳವಾಗಿಸುವ 10 ವರ್ಷಗಳ ನೀಲಿನಕಾಶೆಯನ್ನು ಅಂತಿಮಪಡಿಸಿದ್ದು, ತಂತ್ರಜ್ಞಾನ ಹಾಗೂ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುತ್ತದೆ ಎಂದು ಪ್ರಕಟಿಸಿದೆ. ಅಮೆರಿಕದ ವ್ಯಾಪಾರ ನೀತಿಯಿಂದಾಗಿ ಸೃಷ್ಟಿಯಾಗಿರುವ ಅನಿಶ್ಚಿತತೆ ಹಿನ್ನೆಲೆಯಲ್ಲಿ ಈ ಒಪ್ಪಂದ ಮಹತ್ವ ಪಡೆದಿದೆ.
ಟೋಕಿಯೋದಲ್ಲಿ ನಡೆದ ದ್ವೈವಾರ್ಷಿಕ ಶೃಂಗಸಭೆಯಲ್ಲಿ ಉಭಯ ಮುಖಂಡರು ಆರ್ಥಿಕ ಭದ್ರತಾ ಉಪಕ್ರಮಕ್ಕೆ ಚಾಲನೆ ನೀಡಿದರು. ಸೆಮಿಕಂಡಕ್ಟರ್, ಟೆಲಿಕಾಂ, ಫಾರ್ಮಸ್ಯೂಟಿಕಲ್ಸ್ ಮತ್ತು ವಿಕಾಸಶೀಲ ತಂತ್ರಜ್ಞಾನ ಕ್ಷೇತ್ರಗಳಂಥ ಪ್ರಮುಖ ವಲಯಗಳಲ್ಲಿ ಪೂರೈಕೆ ಸರಣಿಯನ್ನು ಸರಾಗಗೊಳಿಸುವುದನ್ನು ಈ ಉಪಕ್ರಮ ಖಾತರಿಪಡಿಸಲಿದೆ. ಇದರ ಜತೆಗೆ ಉಭಯ ಮುಖಂಡರು ಪ್ರಚಲಿತ ರಕ್ಷಣಾ ಸವಾಲುಗಳಿಗೆ ಪ್ರತಿಕ್ರಿಯಿಸುವ ಜಂಟಿ ಪ್ರಯತ್ನಕ್ಕೆ ಸಂಬಂಧಿಸಿದ ಭದ್ರತಾ ಸಹಕಾರಕ್ಕೆ ಸಂಬಂಧ ಜಂಟಿ ಘೋಷಣೆಯನ್ನೂ ಅಂತಿಮಪಡಿಸಿದರು.
ಆರ್ಥಿಕ ಮತ್ತು ವ್ಯಾಪಾರ ಸಹಕಾರ ಈ ಶೃಂಗದ ಪ್ರಮುಖ ಗುರಿಯಾಗಿದ್ದು, ಟ್ರಂಪ್ ಆಡಳಿತದ ಹೊಸ ವ್ಯಾಪಾರ ನೀತಿಯ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಆರ್ಥಿಕತೆಗಳ ಮೇಲೆ ಆಗಬಹುದಾದ ಪರಿಣಾಮಗಳ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರಗಳಿಗೆ ಬರಲಾಯಿತು. ಸಾರ್ವಜನಿಕ ಹೇಳಿಕೆಯಲ್ಲಿ ಉಭಯ ಗಣ್ಯರು ಅಮೆರಿಕದ ನೀತಿ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿದೇ ಇದ್ದರೂ, ಅಂತರರಾಷ್ಟ್ರೀಯ ಗಡಿಯನ್ನು ಬಲಪಡಿಸುವುದು ಮತ್ತು ರಾಷ್ಟ್ರೀಯ ಆದ್ಯತೆಗಳನ್ನು ಸಂರಕ್ಷಿಸುವ ಬಗ್ಗೆ ಮಾತನಾಡಿದರು.
ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆ ಮತ್ತು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಪಾಲುದಾರಿಕೆ ಕೇವಲ ಉಭಯ ದೇಶಗಳ ಹಿತಾಸಕ್ತಿಯಿಂದ ಮಾತ್ರವಲ್ಲದೇ ಜಾಗತಿಕ ಶಾಂತಿ ಮತ್ತು ಸ್ಥಿರತೆಯ ನಿಟ್ಟಿನಲ್ಲೂ ಮಹತ್ವದ್ದು ಎನ್ನುವುದನ್ನು ಉಭಯ ನಾಯಕರು ಮನಗಂಡಿದ್ದಾಗಿ ಮೋದಿ ಮಾಧ್ಯಮ ಸಂವಾದದಲ್ಲಿ ಸ್ಪಷ್ಟಪಡಿಸಿದರು.