ಭಾರತೀಯರ ವಲಸೆ ವಿರೋಧಿ ರ್‍ಯಾಲಿಗೆ ಆಸ್ಟ್ರೇಲಿಯ ಸರಕಾರ ತೀವ್ರ ಖಂಡನೆ
PC : X \ @The_Indian_Sun
ಕ್ಯಾನ್‌ಬೆರ್ರಾ, ಆ.31: ಭಾರತೀಯರ ವಲಸೆ ಹೆಚ್ಚುತ್ತಿರುವುದರ ವಿರುದ್ಧ ಆಸ್ಟ್ರೇಲಿಯದ ವಿವಿಧ ನಗರಗಳಲ್ಲಿ ನಡೆಯುತ್ತಿರುವ ಪ್ರತಿಟನೆಗಳು ಹಾಗೂ ಅಭಿಯಾನಗಳು ನಡೆಯುತ್ತಿರುವುದನ್ನು ಆಸ್ಟ್ರೇಲಿಯ ಸರಕಾರವು ರವಿವಾರ ಖಂಡಿಸಿದೆ.
ಸಿಡ್ನಿ, ಮೆಲ್ಬೋರ್ನ್, ಬ್ರಿಸ್ಬೇನ್, ಕ್ಯಾನ್‌ಬೆರ್ರಾ, ಅಡಿಲೇಡ್, ಪರ್ತ್, ಹೊಬರ್ಟ್ ಮತ್ತಿತರ ನಗರಗಳಲ್ಲಿ ವಲಸೆ ವಿರೋಧಿ ರ್‍ಯಾಲಿಯನ್ನು ನಡೆಸಲಾಗಿದೆಯೆಂದು ‘ಮಾರ್ಚ್ ಫಾರ್ ಆಸ್ಟ್ರೇಲಿಯ’ ಸಂಘಟನೆಯ ಜಾಲತಾಣವು ತಿಳಿಸಿದೆ.
ಆಸ್ಟ್ರೇಲಿಯದ ಆ್ಯಂಥಣಿ ಆಲ್ಬನೀಸ್ ನೇತೃತ್ವದ ಸರಕಾರವು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಈ ವಾರಾಂತ್ಯದಲ್ಲಿ ಮಾರ್ಚ್ ಫಾರ್ ಆಸ್ಟ್ರೇಲಿಯ ನಡೆಸಲು ಉದ್ದೇಶಿಸಿರುವ ವಲಸೆ ವಿರೋಧಿ ರ್‍ಯಾಲಿಯನ್ನು ವಿರೋಧಿಸುವುದಾಗಿ ಹೇಳಿದೆ.
ಪರಂಪರೆ ಯಾವುದೇ ಇರಲಿ, ಎಲ್ಲರೂ ಸುರಕ್ಷತೆಯ ಹಕ್ಕನ್ನು ಹೊಂದಿದ್ದಾರೆ ಹಾಗೂ ನಮ್ಮ ದೇಶದಲ್ಲಿ ಅವರೆಲ್ಲರಿಗೂ ಸ್ವಾಗತವಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.
‘‘ ನಮ್ಮ ಸಾಮಾಜಿಕ ಸಾಮರಸ್ಯವನ್ನು ದುರ್ಬಲಗೊಳಿಸುವ ಹಾಗೂ ವಿಭಜಿಸಲು ಬಯಸುವವರಿಗೆ ನಮ್ಮ ದೇಶದಲ್ಲಿ ಸ್ಥಾನವಿಲ್ಲ. ಬಹು ಸಂಸ್ಕೃತಿವಾದವು ನಮ್ಮ ರಾಷ್ಟ್ರೀಯ ಆಸ್ಮಿತೆಯ ಅವಿಭಾಜ್ಯ ಹಾಗೂ ಅಮೂಲ್ಯ ಭಾಗವಾಗಿದೆ ’’ ಎಂದು ಆಸ್ಟ್ರೇಲಿಯದ ಗೃಹ ಸಚಿವ ಟೋನಿ ಬುರ್ಕ್ ತಿಳಿಸಿದ್ದಾರೆ.
‘ಮಾರ್ಚ್ ಫಾರ್ ಆಸ್ಟ್ರೇಲಿಯ’ ಗ್ರೂಪ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ‘‘ ನಮ್ಮ ಬೀದಿಗಳು ಆಸ್ಟ್ರೇಲಿಯನ್ ವಿರೋಧಿ ದ್ವೇಷ, ವಿದೇಶಿ ಸಂಘರ್ಷಗಳ ಪ್ರದರ್ಶನದ ತಾಣಗಳಾಗಿ ಬೆಳೆಯುತ್ತಿರುವುದನ್ನು ಕಾಣುತ್ತಿವೆ. ನಮ್ಮ ಸಮುದಾಯಗಳನ್ನು ಒಂದುಗೂಡಿಸಿದ್ದ ಬಾಂಧವ್ಯಗಳನ್ನು ಸಾಮೂಹಿಕ ವಲಸೆಗಳು ಹರಿದುಹಾಕುತ್ತಿವೆ", ಎಂದು ಅದು ಹೇಳಿಕೊಂಡಿದೆ.
ಈ ನಡಿಗೆಯು ಆಸ್ಟ್ರೇಲಿಯವನ್ನು ನಿರ್ಮಿಸಿದ ಜನತೆ, ಸಂಸ್ಕೃತಿ, ರಾಷ್ಟ್ರದ ಪರವಾಗಿದೆ ಹಾಗೂ ನಮ್ಮ ಭವಿಷ್ಯವನ್ನು ನಿರ್ಧರಿಸುವ ನಮ್ಮ ಹಕ್ಕಿಗಾಗಿ ಎಂದು ಅದು ಸಮರ್ಥಿಸಿಕೊಂಡಿದೆ.