Photo Credit: National Herald

ಕಠ್ಮಂಡು: ನೇಪಾಳದ ಹಿಮ್ಲುಂಗ್ ಹಿಮಾಲ್ ಪರ್ವತದ ಬೇಸ್ ಕ್ಯಾಂಪ್‌ ನಲ್ಲಿ ಹಿಮಪಾತ ಸಂಭವಿಸಿ ಕನಿಷ್ಠ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಮಧ್ಯ ನೇಪಾಳದಲ್ಲಿರುವ ಹಿಮ್ಲುಂಗ್ ಹಿಮಾಲ್ ಪರ್ವತದ ಬೇಸ್ ಕ್ಯಾಂಪ್‌ ನಲ್ಲಿ ಪರ್ವತಾರೋಹಣಕ್ಕೆ ಸಿದ್ಧತೆ ನಡೆಯುತ್ತಿತ್ತು. ಅಕ್ಟೋಬರ್ 1ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ ನ ತಂಡವೊಂದು ಅಲ್ಲಿಗೆ ಆಗಮಿಸಬೇಕಿತ್ತು. ಆ ತಂಡಕ್ಕಾಗಿ ಶೆರ್ಪಾಗಳು ಮತ್ತು ಅಡುಗೆ ಸಿಬ್ಬಂದಿ ಮುಂಚಿತವಾಗಿ ಬೇಸ್ ಕ್ಯಾಂಪ್ ತಲುಪಿದ್ದರು.

ಅವರು ಡೇರೆಗಳನ್ನು ಹಾಕುವುದು, ಪರ್ವತಾರೋಹಣಕ್ಕೆ ಹಗ್ಗಗಳನ್ನು ಅಳವಡಿಸುವುದು, ಪರ್ವತದ ಮೇಲಿನ ಪರಿಸ್ಥಿತಿಯನ್ನು ಪರಿಶೀಲಿಸುವುದು ಹಾಗೂ ಅಡುಗೆ ವ್ಯವಸ್ಥೆ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ಪರ್ವತದ ಇಳಿಜಾರಿನಿಂದ ಭಾರಿ ಪ್ರಮಾಣದಲ್ಲಿ ಹಿಮ ಮತ್ತು ಬಂಡೆಗಳು ಕುಸಿದುಬಂದಿವೆ.

ಘಟನೆ ನಡೆದ ಪ್ರದೇಶದಲ್ಲಿ ರವಿವಾರವೂ ಭಾರಿ ಮಳೆ ಮುಂದುವರಿದಿತ್ತು. ಹಿಮಾಲಯದ ಹಲವು ಭಾಗಗಳಲ್ಲಿ ಪ್ರತಿಕೂಲ ಹವಾಮಾನದ ಕುರಿತು ಎಚ್ಚರಿಕೆ ನೀಡಲಾಗಿತ್ತು.

ಇತ್ತೀಚೆಗೆ ನೇಪಾಳ–ಚೀನಾ ಗಡಿಯಲ್ಲಿ ಹಿಮನದಿ ಕುಸಿತ ಮತ್ತು ಭೂಕುಸಿತದಿಂದ ಭೀಕರ ಪ್ರವಾಹ ಸಂಭವಿಸಿತ್ತು. ಆ ದುರಂತದಲ್ಲಿ ಕನಿಷ್ಠ 1,300 ಮಂದಿ ಮೃತಪಟ್ಟಿದ್ದು, 5,000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು. ಈ ಘಟನೆ ನಡೆದ ಕೆಲವೇ ವಾರಗಳ ಬಳಿಕ ಹಿಮ್ಲುಂಗ್ ಹಿಮಾಲ್‌ ನಲ್ಲಿ ಹಿಮಪಾತ ಸಂಭವಿಸಿದೆ.

ಹಿಮ್ಲುಂಗ್ ಹಿಮಾಲ್ ಪರ್ವತಾರೋಹಣ ಅಭಿಯಾನವನ್ನು ‘ಹಿಮಾಲಯನ್ ಹಾಲಿಡೇಸ್’ ಕಂಪೆನಿ ಆಯೋಜಿಸುತ್ತಿದೆ. ಕಂಪೆನಿಯ ಜನರಲ್ ಮ್ಯಾನೇಜರ್ ಬರುನ್ ಭಂಡಾರಿ ಅವರ ಪ್ರಕಾರ, ಬೇಸ್ ಕ್ಯಾಂಪ್‌ ನಲ್ಲಿದ್ದ ಕನಿಷ್ಠ ಆರು ನೇಪಾಳಿಗಳು ನಾಪತ್ತೆಯಾಗಿದ್ದಾರೆ.

“ನಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ. ನಮ್ಮ ತಂಡದ ಆರು ಅಥವಾ ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂಬುದು ಬೆಳಿಗ್ಗೆ ತಿಳಿದುಬಂದಿದೆ. ಆದರೆ ನಿಖರ ಸಂಖ್ಯೆ ಇನ್ನೂ ಖಚಿತವಾಗಿಲ್ಲ” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor