ಬಲೂಚಿಸ್ತಾನ: ಬಾಂಬ್ ಸ್ಫೋಟದಲ್ಲಿ4 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ
ಪೇಷಾವರ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನದ ಖಿಲಾ ಅಬ್ದುಲ್ಲಾ ಜಿಲ್ಲೆಯ ಜಬ್ಬಾರ್ ಮಾರ್ಕೆಟ್ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ 4 ಮಂದಿ ಮೃತಪಟ್ಟಿದ್ದು ಕನಿಷ್ಠ 20 ಮಂದಿ ಗಾಯಗೊಂಡಿರುವುದಾಗಿ ಹಿರಿಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಗಡಿ ಭದ್ರತಾ ಪಡೆಯ ಕೇಂದ್ರ ಕಚೇರಿಯ ಹಿಂಭಾಗದ ಗೋಡೆಯ ಪಕ್ಕ ಇರುವ ಮಾರ್ಕೆಟ್ ಬಳಿ ರವಿವಾರ ರಾತ್ರಿ ನಡೆದ ಸ್ಫೋಟದಲ್ಲಿ ಕಟ್ಟಡಗಳಿಗೆ ತೀವ್ರ ಹಾನಿಯಾಗಿದ್ದು ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಮಾರ್ಕೆಟ್ ನಲ್ಲಿದ್ದ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದು ಬೆಂಕಿ ಮತ್ತು ದಟ್ಟ ಹೊಗೆ ಆವರಿಸಿಕೊಂಡಿತ್ತು. ಬಾಂಬ್ ಸ್ಫೋಟದ ಬಳಿಕ ಗುರುತಿಸಲಾಗದ ದುಷ್ಕರ್ಮಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ಸಂಕ್ಷಿಪ್ತ ಗುಂಡಿನ ಚಕಮಕಿ ನಡೆದಿದೆ ಎಂದು ಜಿಲ್ಲಾಧಿಕಾರಿ ರಿಯಾಝ್ ಖಾನ್ ಹೇಳಿದ್ದಾರೆ. ಕಾನೂನು ಜಾರಿ ಅಧಿಕಾರಿಗಳು ಪ್ರದೇಶವನ್ನು ಮುಚ್ಚಿ ಸಮಗ್ರ ಶೋಧ ಮತ್ತು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಯಾವುದೇ ಸಂಘಟನೆ ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.