×
Ad

2 ರಾಷ್ಟ್ರ ನಿರ್ಮಾಣವೇ ಪರಿಹಾರ: ಇಸ್ರೇಲ್‌-ಫೆಲೆಸ್ತೀನ್‌ ಸಂಘರ್ಷದ ಕುರಿತು ಅಮೆರಿಕ

Update: 2023-10-26 13:31 IST

ಜೋ ಬೈಡನ್ (PTI) 

ವಾಷಿಂಗ್ಟನ್: ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನಿಯನ್ನರ ವಿರುದ್ಧ ಇಸ್ರೇಲ್ ಪ್ರತೀಕಾರದ ದಾಳಿ ನಡೆಸುತ್ತಿರುವುದರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾತನಾಡಿದ್ದು, ದಶಕಗಳ ಕಾಲದ ಇಸ್ರೇಲ್- ಫೆಲೆಸ್ತೀನ್‌ ಸಂಘರ್ಷವನ್ನು ಕೊನೆಗೊಳಿಸಲು ಎರಡು-ದೇಶ ಸ್ಥಾಪನೆ ಮಾಡುವ ತನ್ನ ಬದ್ಧತೆಯನ್ನು ದ್ವಿಗುಣಗೊಳಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಉರಿಯುತ್ತಿರುವ ಮಧ್ಯಪ್ರಾಚ್ಯದಲ್ಲಿ ಈ ದಾಳಿಯು ಬೆಂಕಿಯ ಮೇಲೆ ಪೆಟ್ರೋಲ್ ಸುರಿಯುವುದಕ್ಕೆ ಸಮನಾಗಿರುತ್ತದೆ ಎಂದು ಬೈಡನ್ ಹೇಳಿದ್ದಾರೆ.

"ಇದು ನಿಲ್ಲಬೇಕು. ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಇದು ಈಗ ನಿಲ್ಲಬೇಕು” ಎಂದು ವಾಷಿಂಗ್ಟನ್‌ಗೆ ಭೇಟಿ ನೀಡಿರುವ ಆಸ್ಟ್ರೇಲಿಯ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ನಡೆದ ಸುದ್ದಿಗೋಷ್ಠಿಯ ಆರಂಭದಲ್ಲಿ ಬೈಡನ್ ಹೇಳಿದರು.

ಹಮಾಸ್ ದಾಳಿಯ ನಂತರ ಫೆಲೆಸ್ತೀನಿಯನ್ನರ ವಿರುದ್ಧ ಇಸ್ರೇಲ್‌ ನಡೆಸುತ್ತಿರುವ ಹಿಂಸಾಚಾರ ತೀವ್ರಗೊಂಡಿದೆ.

ಹಮಾಸ್ ದಾಳಿಯನ್ನು ಬೈಡನ್ ಮತ್ತೊಮ್ಮೆ ಖಂಡಿಸಿದ್ದು, ಸೌದಿ ಅರೇಬಿಯ ಸೇರಿದಂತೆ ಕೆಲವು ನೆರೆಹೊರೆಯ ಅರಬ್‌ ದೇಶಗಳೊಂದಿಗೆ ಇಸ್ರೇಲಿ ಸಂಬಂಧಗಳನ್ನು ಬಲಪಡಿಸುವ ಯುಎಸ್ ನೇತೃತ್ವದ ಪ್ರಯತ್ನಗಳನ್ನು ವಿಫಲಗೊಳಿಸುವ ಉದ್ದೇಶದಿಂದ ಹಮಾಸ್ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.

ಇಸ್ರೇಲ್-ಹಮಾಸ್ ಸಂಘರ್ಷವು ಅಂತ್ಯಗೊಂಡ ನಂತರ, ಇಸ್ರೇಲಿಗಳು, ಫೆಲೆಸ್ತೀನಿಯರು ʼಎರಡು ದೇಶʼ ಪರಿಹಾರದ ಕಡೆಗೆ ಕೆಲಸ ಮಾಡಬೇಕು ಎಂದು ಬೈಡನ್ ಹೇಳಿದರು.

"ಇಸ್ರೇಲಿಗಳು ಮತ್ತು ಫೆಲೆಸ್ತೀನಿಯನ್ನರು ಸುರಕ್ಷತೆ, ಘನತೆ ಮತ್ತು ಶಾಂತಿಯಿಂದ ಅಕ್ಕಪಕ್ಕದಲ್ಲಿ ಬದುಕಲು ಸಮಾನವಾಗಿ ಅರ್ಹರಾಗಿದ್ದಾರೆ. ಈ ಬಿಕ್ಕಟ್ಟು ಕೊನೆಗೊಂಡಾಗ, ಮುಂದೆ ಏನಾಗುತ್ತದೆ ಎಂಬುದರ ದೃಷ್ಟಿ ಇರಬೇಕು. ನಮ್ಮ ದೃಷ್ಟಿಯಲ್ಲಿ, ಎರಡು-ದೇಶ ನಿರ್ಮಾಣ ಪರಿಹಾರವಾಗಿದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News