×
Ad

ಬೊಲಿವಿಯಾದಲ್ಲಿ ಕಣಿವೆಗೆ ಉರುಳಿದ ಬಸ್; 25 ಮಂದಿ ಮೃತ್ಯು

Update: 2025-03-04 07:45 IST

PC: x.com/elsalvador

ಪೊಟೋಸಿ ಸಿಟಿ, ಬೊಲಿವಿಯಾ: ಪಿಕಪ್ ಟ್ರಕ್ ಗೆ  ಢಿಕ್ಕಿ ಹೊಡೆದ ಬಸ್ಸೊಂದು ಕಣಿವೆಗೆ ಉರುಳಿ ಸಂಭವಿಸಿದ ಭೀಕರ ದುರಂತದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟು, ಇತರ 26 ಮಂದಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

ನಗರದಿಂದ 90 ಕಿಲೋಮೀಟರ್ ದೂರದಲ್ಲಿ ಈ ಅವಘಡ ಸಂಭವಿಸಿದ್ದು,  ಲ್ಯಾಟಿನ್ ಅಮೆರಿಕಾದ ಪ್ರಮುಖ ಉತ್ಸವವಾದ ಒರುರೊ ಕಾರ್ನಿವಲ್ ಮುಗಿಸಿ  ಜನ ಈ ಬಸ್ಸಿನಲ್ಲಿ ಬರುತ್ತಿದ್ದರು. ಟ್ರಕ್ ಚಾಲಕ ತನ್ನ ವಾಹನವನ್ನು ವಿರುದ್ಧ ದಿಕ್ಕಿನಲ್ಲಿ ಮುನ್ನುಗ್ಗಿಸಿದ್ದು ಅಪಘಾತಕ್ಕೆ ಕಾರಣವಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಟ್ರಕ್ ಚಾಲಕ ಚಿಕಿತ್ಸೆ ಪಡೆಯುತ್ತಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವಕ್ತಾರ ಲಿಂಬರ್ತ್ ಚೋಕಿ ಮಾಹಿತಿ ನೀಡಿದ್ದಾರೆ. ಘಟನೆಯ ವಿವಿಧ ಆಯಾಮಗಳ ಬಗ್ಗೆ ಅಭಿಯೋಜಕರ ಕಚೇರಿ ತನಿಖೆ ಆರಂಭಿಸಿದೆ.

ಕಳೆದ ಎರಡು ದಿನಗಳಲ್ಲಿ ನಡೆದ ಎರಡನೇ ಭೀಕರ ಅಪಘಾತ ಇದಾಗಿದ್ದು, ಮೊನ್ನೆ ಎರಡು ಬಸ್ಸುಗಳು ಪರಸ್ಪರ ಢಿಕ್ಕಿಯಾಗಿ ಸಂಭವಿಸಿದ ದುರಂತದಲ್ಲಿ 37 ಮಂದಿ ಬಲಿಯಾಗಿದ್ದರು. ಲ್ಯಾಟಿನ್ ಅಮೆರಿಕದ ಪ್ರಮುಖ ಹಬ್ಬ ಎನಿಸಿದ ಒರೂರೊ ಕಾರ್ನಿವಲ್ ಗೆ ಈ ವಾಹನಗಳು ತೆರಳುತ್ತಿದ್ದವು.

ಬೊಲಿವಿಯಾದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದ್ದು, 1.2 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ವಾರ್ಷಿಕ 1400 ಮಂದಿ ಅಪಘಾತಗಳಲ್ಲಿ ಸಾಯುತ್ತಿದ್ದಾರೆ. ದೇಶದಲ್ಲಿ ಸಂಭವಿಸುವ ಒಟ್ಟು ಅಪಘಾತಗಳಲ್ಲಿ ಶೇಕಡ 10.6ರಷ್ಟು ಕೇವಲ ಪೊಟೊಸಿಯಲ್ಲಿ ನಡೆಯುತ್ತಿವೆ ಎಂದು ಅಬ್ಸರ್ವೇಟರಿ ಆಫ್ ಸಿಟಿಜನ್ ಸೆಕ್ಯುರಿಟಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News