ಬುರ್ಕಿನೊ ಪಾಸೊ: ಸೇನಾಡಳಿತ ಮತ್ತೆ 5 ವರ್ಷ ವಿಸ್ತರಣೆ
PC : freepik.
ಔಗಡೌಗ : ದೇಶವನ್ನು ಪ್ರಜಾಪ್ರಭುತ್ವಕ್ಕೆ ಪರಿವರ್ತನೆಗೊಳಿಸುವ ಪ್ರಕ್ರಿಯೆಯನ್ನು ವಿಸ್ತರಿಸಲು ಶನಿವಾರ ನಡೆದ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಒಮ್ಮತ ಮೂಡಿದ ಹಿನ್ನೆಲೆಯಲ್ಲಿ ಸೇನಾಡಳಿತವನ್ನು ಜುಲೈಯಿಂದ ಮತ್ತೆ 5 ವರ್ಷ ವಿಸ್ತರಿಸಲಾಗುವುದು ಎಂದು ಬುರ್ಕಿನೊ ಫಾಸೊ ಸರಕಾರ ಹೇಳಿದೆ.
ಔಗಡೌಗದಲ್ಲಿ ನಡೆದ ಸಭೆಯಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳು, ಭದ್ರತಾ ಪಡೆ, ರಕ್ಷಣಾ ಪಡೆ ಹಾಗೂ ಪರಿವರ್ತನಾ ಅಸೆಂಬ್ಲಿಯ ಸದಸ್ಯರು ಪಾಲ್ಗೊಂಡಿದ್ದರು. ಆದರೆ ಬಹುತೇಕ ರಾಜಕೀಯ ಪಕ್ಷಗಳು ಸಭೆಯನ್ನು ಬಹಿಷ್ಕರಿಸಿದ್ದವು.
2022ರಲ್ಲಿ ನಡೆದ ಕ್ಷಿಪ್ರದಂಗೆಯಲ್ಲಿ ಅಧಿಕಾರ ಕೈವಶಪಡಿಸಿಕೊಂಡಿದ್ದ ಸೇನಾಧಿಕಾರಿಗಳು, ಭದ್ರತಾ ವ್ಯವಸ್ಥೆ ಸುಧಾರಿಸಿದರೆ ನಾಗರಿಕ ಆಡಳಿತ ವ್ಯವಸ್ಥೆಯನ್ನು ಮರುಸ್ಥಾಪಿಸಲು ಈ ವರ್ಷದ ಜುಲೈಯಲ್ಲಿ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದ್ದರು. 2024ರ ಜುಲೈ 2ರಿಂದ ಮುಂದಿನ 60 ತಿಂಗಳನ್ನು ಪರಿವರ್ತನೆಯ ಅವಧಿಯೆಂದು ನಿಗದಿಗೊಳಿಸಲಾಗಿದೆ ಎಂದು ಸಭೆಯ ಬಳಿಕ ರಾಷ್ಟ್ರೀಯ ಸಂವಾದ ಪ್ರಕ್ರಿಯೆಯ ಸಂಘಟನಾ ಸಮಿತಿ ಅಧ್ಯಕ್ಷ ಮೂಸಾ ಡಯಾಲೊ ಸುದ್ದಿಗೋಷ್ಠಿ ಯಲ್ಲಿ ಹೇಳಿದ್ದಾರೆ.