`ಕೆನಡಾ ಉತ್ಪನ್ನ ಖರೀದಿಸಿ': ಅಭಿಯಾನ ಆರಂಭ
Photo : freepik
ಟೊರಂಟೊ: ಟ್ರಂಪ್ ನಂಬಿಕೆದ್ರೋಹಕ್ಕೆ ಪ್ರತಿಯಾಗಿ ಅಮೆರಿಕ ನಿರ್ಮಿತ ಮದ್ಯ, ಸರಕುಗಳು ಕೆನಡಾದ ಸೂಪರ್ ಮಾರ್ಕೆಟ್, ಅಂಗಡಿಗಳ ಕಪಾಟಿನಿಂದ ತೆರವುಗೊಂಡಿದ್ದು `ಕೆನಡಾ ಉತ್ಪನ್ನ ಖರೀದಿಸಿ' ಅಭಿಯಾನಕ್ಕೆ ಚಾಲನೆ ದೊರಕಿರುವುದಾಗಿ ವರದಿಯಾಗಿದೆ.
ಅಮೆರಿಕಕ್ಕೆ ಪ್ರವಾಸವನ್ನು ಕೆನಡಿಯನ್ನರು ರದ್ದುಗೊಳಿಸಿದ್ದು ಅಮೆರಿಕದ ಮದ್ಯ ಹಾಗೂ ಇತರ ಸರಕುಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಹತ್ತಿರವಿರುವ ದೇಶದ ಮೇಲೆ ಟ್ರಂಪ್ ಘೋಷಿಸಿರುವ ಆರ್ಥಿಕ ಯುದ್ಧವು ಕೆನಡಿಯನ್ನರಿಗೆ ಆಘಾತ ತಂದಿದೆ ಎಂದು ಕೆನಡಾದ ಗಡಿಭಾಗದ ನಗರ ವಿಂಡ್ಸರ್ ನ ಮೇಯರ್ ಡ್ರಿವ್ ಡಿಕನ್ಸ್ ಪ್ರತಿಕ್ರಿಯಿಸಿದ್ದಾರೆ.
► ಕೆನಡಾ ಅಮೆರಿಕದ ರಾಜ್ಯವಾದರೆ ಸುಂಕದ ರಗಳೆಯೇ ಇಲ್ಲ: ಟ್ರಂಪ್
ಕೆನಡಾವು ಅಮೆರಿಕದ 51ನೇ ರಾಜ್ಯವಾಗಲಿ ಎಂಬ ಆಗ್ರಹವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಕೆನಡಾಕ್ಕೆ ಸಬ್ಸಿಡಿ ರೂಪದಲ್ಲಿ ಅಮೆರಿಕ ಕೋಟ್ಯಾಂತರ ಡಾಲರ್ ಮೊತ್ತವನ್ನು ಪಾವತಿಸುತ್ತದೆ. ಈ ಬೃಹತ್ ಸಬ್ಸಿಡಿಯಿಲ್ಲದಿದ್ದರೆ ಕೆನಡಾವು ಕಾರ್ಯಸಾಧ್ಯವಾದ ದೇಶವೆಂಬ ಅಸ್ತಿತ್ವ ಕಳೆದುಕೊಳ್ಳುತ್ತದೆ. ಆದ್ದರಿಂದ ಕೆನಡಾವು ನಮ್ಮ 51ನೇ ರಾಜ್ಯವಾಗಬೇಕು. ಈ ಕ್ರಮವು ಕಡಿಮೆ ತೆರಿಗೆಗಳು ಮತ್ತು ಕೆನಡಾದ ಜನತೆಗೆ ಉತ್ತಮ ಮಿಲಿಟರಿ ರಕ್ಷಣೆ ಒದಗಿಸುತ್ತದೆ. ಜತೆಗೆ ಸುಂಕದ ರಗಳೆಯೇ ಇಲ್ಲ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
►ಅಮೆರಿಕದ ವಿರುದ್ಧ ಕಾನೂನು ಕ್ರಮ: ಕೆನಡಾ
ಕೆನಡಾದ ಸರಕುಗಳ ಮೇಲೆ 25% ಸುಂಕ ವಿಧಿಸುವ ಅಮೆರಿಕದ ನಿರ್ಧಾರವನ್ನು ಪ್ರಶ್ನಿಸಿ ಸೂಕ್ತ ಅಂತರಾಷ್ಟ್ರೀಯ ವೇದಿಕೆಯಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಕೆನಡಾ ಘೋಷಿಸಿದೆ.
ಸುಂಕ ವಿಧಿಸುವ ಅಮೆರಿಕದ ಕ್ರಮ ಕಾನೂನುಬಾಹಿರ ಮತ್ತು ನ್ಯಾಯಸಮ್ಮತವಲ್ಲ. ಅಮೆರಿಕದೊಂದಿಗೆ ನಾವು ಹಂಚಿಕೊಂಡಿರುವ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಕಾನೂನಿನ ಮೊರೆಹೋಗಲು ನಮಗೆ ಅವಕಾಶವಿದೆ ಎಂದು ಕೆನಡಾದ ಅಧಿಕಾರಿಗಳು ಹೇಳಿದ್ದಾರೆ.