ಕೆನಡಾದಲ್ಲಿ ಭಾರತೀಯ ಮೂಲದ ಉದ್ಯಮಿಯ ಗುಂಡಿಕ್ಕಿ ಹತ್ಯೆ
ಚಂಡಿಗಢ, ಅ.28: ಭಾರತ ಸಂಜಾತ ಪಂಜಾಬಿ ಉದ್ಯಮಿ ದರ್ಶನ್ ಸಿಂಗ್ ಸಹಸಿ ಅವರನ್ನು ಕೆನಡಾ ಬ್ರಿಟೀಷ್ ಕೊಲಂಬಿಯಾದ ಅಬ್ಬೋಟ್ಸ್ಫೋರ್ಡ್ ನಗರದಲ್ಲಿರುವ ಅವರ ಮನೆಯ ಹೊರಗೆ ಮಂಗಳವಾರ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ.
ಪಂಜಾಬ್‌ನ ಲುಧಿಯಾನದ ದೊರಾಹಾ ಸಮೀಪದ ರಾಜಗಢ ಗ್ರಾಮದವರಾದ ದರ್ಶನ್ ಸಿಂಗ್ ಸಹಸಿ ಬ್ರಿಟೀಷ್ ಕೊಲಂಬಿಯಾದ ಅಬ್ಬೋಟ್ಸ್ಫೋರ್ಡ್ ನಗರದಲ್ಲಿ ಉದ್ಯಮಿಯಾಗಿದ್ದರು.
68 ವರ್ಷದವರಾಗಿದ್ದ ಸಹಸಿ ಅವರು ಜಗತ್ತಿನ ಪ್ರಮುಖ ಬಟ್ಟೆ ಮರು ಬಳಕೆದಾರರ ಸಂಘಟನೆಗಳಲ್ಲಿ ಒಂದಾದ ‘ಕ್ಯಾನಮ್ ಇಂಟರ್ನ್ಯಾಷನಲ್’ನ ಅಧ್ಯಕ್ಷರಾಗಿದ್ದರು.
ಅವರು ಸರ್ರಿ ಸಮೀಪದ ಅಬ್ಬೋಟ್ಸ್ಫೋರ್ಡ್‌ನ ರಿಜ್ವ್ಯೆವ್ ಡ್ರೈವ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರು ಮನೆಯಿಂದ ಮೇಪಲ್ ರಿಡ್ಜ್‌ನಲ್ಲಿರುವ ಕಚೇರಿಗೆ ತೆರಳಲು ಕಾರು ಹತ್ತಿ ಕುಳಿತಾಗ ಗುಂಡು ಹಾರಿಸಲಾಗಿದೆ. ಗುಂಡುಗಳಿಂದ ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ದುಷ್ಕರ್ಮಿಗಳು ಕಾಯುತ್ತಿದ್ದರು. ಸಹಸಿ ಅವರು ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಿದ್ದಾರೆ ಹಾಗೂ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹತ್ಯೆಗೆ ಸಂಬಂಧಿಸಿ ಕೆನಡಾ ಪೊಲೀಸರು ಅಧಿಕೃತವಾಗಿ ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ಸುಲಿಗೆ ಹಣಕ್ಕೆ ಸಂಬಂಧಿಸಿದ ಸಾಧ್ಯತೆ ಕುರಿತು ಕೂಡ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಸಹಸಿ ಅವರು ಸುಲಿಗೆ ಹಣದ ಬೇಡಿಕೆ ಒಡ್ಡಿದ ಕರೆ ಸ್ವೀಕರಿಸಿದ್ದರು. ಆದರೆ, ಅವರು ಅದನ್ನು ನಿರ್ಲಕ್ಷಿಸಿದ್ದರು ಎಂದು ವರದಿಗಳು ತಿಳಿಸಿವೆ.