ನಾವು ಯಾರನ್ನೂ ಗುರಿಯಾಗಿಸಿಲ್ಲ: ಟ್ರಂಪ್ ಆರೋಪಕ್ಕೆ ಚೀನಾ ಪ್ರತಿಕ್ರಿಯೆ
PC : NDTV
ಬೀಜಿಂಗ್, ಸೆ.4: ರಶ್ಯ ಮತ್ತು ಉತ್ತರ ಕೊರಿಯಾದ ಜೊತೆ ಸೇರಿಕೊಂಡು ಚೀನಾವು ಅಮೆರಿಕದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚೀನಾ `ನಾವು ಇತರ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವಾಗ ಯಾವುದೇ ಮೂರನೇ ವ್ಯಕ್ತಿಯನ್ನು ಗುರಿಯಾಗಿಸುವುದಿಲ್ಲ' ಎಂದಿದೆ.
ಚೀನಾವು ಅಮೆರಿಕದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂಬ ಆರೋಪವನ್ನು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಗುವಾವೊ ಜಿಯಾಕುನ್ ನಿರಾಕರಿಸಿದ್ದಾರೆ. ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಶ್ಯದ ವಿದೇಶಾಂಗ ನೀತಿಯ ಸಲಹೆಗಾರ ಯೂರಿ ಉಷಕೋವ್ ` ಅವರು ವ್ಯಂಗ್ಯವಾಗಿ ಹೇಳಿದ್ದಾರೆಂದು ರಶ್ಯ ಆಶಿಸಿದೆ' ಎಂದಿದ್ದಾರೆ.
ಪ್ರಸಕ್ತ ಅಂತರಾಷ್ಟ್ರೀಯ ಪರಿಸ್ಥಿತಿಗಳಲ್ಲಿ ಅಮೆರಿಕ, ಅಮೆರಿಕದ ಈಗಿನ ಆಡಳಿತ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ವಹಿಸಿರುವ ಪಾತ್ರದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅಮೆರಿಕದ ವಿರುದ್ಧ ಯಾರೂ ಪಿತೂರಿ ನಡೆಸುತ್ತಿಲ್ಲ ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.