ನಮ್ಮ ಹಿತಾಸಕ್ತಿಗಳಿಗೆ ಹಾನಿಯಾದರೆ ಸುಮ್ಮನೆ ಇರುವುದಿಲ್ಲ: ಅಮೆರಿಕಕ್ಕೆ ಚೀನಾದ ಕಠಿಣ ಸಂದೇಶ
ಸಾಂದರ್ಭಿಕ ಚಿತ್ರ | Photo Credit : NDTV
ಬೀಜಿಂಗ್, ಅ.16: ರಶ್ಯದಿಂದ ತೈಲ ಖರೀದಿಸುವುದು ಚೀನಾದ ನ್ಯಾಯಸಮ್ಮತ ಮತ್ತು ಕಾನೂನು ಬದ್ಧ ಪ್ರಕ್ರಿಯೆಯಾಗಿದ್ದು ನಮ್ಮ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುವ ಏಕಪಕ್ಷೀಯ ನಿರ್ಬಂಧಗಳನ್ನು ಅಮೆರಿಕಾ ಜಾರಿಗೊಳಿಸಿದರೆ ದೃಢವಾದ ಪ್ರತಿಕ್ರಮ ತೆಗೆದುಕೊಳ್ಳುವುದಾಗಿ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿನ್ ಜಿಯಾನ್ ಗುರುವಾರ ಹೇಳಿದ್ದಾರೆ.
'ರಶ್ಯದಿಂದ ತೈಲ ಖರೀದಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಇದೀಗ ಚೀನಾದ ಸರದಿ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಬೀಜಿಂಗ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು ` ರಶ್ಯ ಸೇರಿದಂತೆ ವಿಶ್ವದಾದ್ಯಂತದ ದೇಶಗಳೊಂದಿಗೆ ಚೀನಾದ ಸಾಮಾನ್ಯ ವ್ಯಾಪಾರ ಮತ್ತು ಇಂಧನ ಸಹಕಾರವು ನ್ಯಾಯಸಮ್ಮತ ಮತ್ತು ಕಾನೂನುಬದ್ಧವಾಗಿದೆ' ಎಂದು ಹೇಳಿದರು.
ಉಕ್ರೇನ್ ಬಿಕ್ಕಟ್ಟಿನ ವಿಷಯದಲ್ಲಿ ಚೀನಾ ಯಾವಾಗಲೂ ವಸ್ತುನಿಷ್ಠ ಮತ್ತು ನ್ಯಾಯೋಚಿತ ನಿಲುವನ್ನು ಹೊಂದಿದೆ ಮತ್ತು ಅದರ ನೀತಿಯು ಮುಕ್ತವಾಗಿದ್ದು ಎಲ್ಲರೂ ನೋಡಬಹುದಾಗಿದೆ. ಚೀನಾ ಏನು ಮಾಡಬೇಕೆಂದು ಅಮೆರಿಕಾ ನಿರ್ದೇಶಿಸುವುದನ್ನು ನಾವು ದೃಢವಾಗಿ ವಿರೋಧಿಸುತ್ತೇವೆ ಮತ್ತು ಚೀನಾದ ಮೇಲೆ ಏಕಪಕ್ಷೀಯ ಕಾನೂನುಬಾಹಿರ ನಿರ್ಬಂಧಗಳನ್ನು ಹೇರುವುದನ್ನು ಬಲವಾಗಿ ವಿರೋಧಿಸುತ್ತೇವೆ. ಚೀನಾದ ನ್ಯಾಯಸಮ್ಮತ ಹಕ್ಕುಗಳು ಹಾಗೂ ಹಿತಾಸಕ್ತಿಗಳಿಗೆ ಹಾನಿಯಾದರೆ, ನಮ್ಮ ಸಾರ್ವಭೌಮತ್ವ, ಅಭಿವೃದ್ಧಿ ಮತ್ತು ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಲು ಬಲವಾದ ಪ್ರತಿಕ್ರಮಗಳನ್ನು ತೆಗೆದುಕೊಳ್ಳುತ್ತೇವೆ' ಎಂದವರು ಹೇಳಿದ್ದಾರೆ.
ರಶ್ಯದ ಪಳೆಯುಳಿಕೆ ಇಂಧನವನ್ನು ಖರೀದಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಮತ್ತು ಭಾರತ ಮೊದಲ ಎರಡು ಸ್ಥಾನಗಳಲ್ಲಿವೆ ಎಂದು `ಸೆಂಟರ್ ಫಾರ್ ರಿಸರ್ಚ್ ಎನರ್ಜಿ ಆ್ಯಂಡ್ ಕ್ಲೀನ್ ಏರ್' ವರದಿ ಮಾಡಿದೆ. ರಶ್ಯದ ಇಂಧನದ 60%ವನ್ನು ಚೀನಾ ಖರೀದಿಸುತ್ತದೆ ಎಂದು ಅಮೆರಿಕಾದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಹೇಳಿದ್ದಾರೆ.
ಚೀನಾವು ವಿರಳ ಖನಿಜಗಳ ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧಗಳು `ವಿಶ್ವದ ವಿರುದ್ಧ ಚೀನಾ' ಎಂಬ ಪರಿಸ್ಥಿತಿಗೆ ಸಮವಾಗಿದೆ ಎಂಬ ಬೆಸ್ಸೆಂಟ್ ಹೇಳಿಕೆಗೆ ಪ್ರತಿಕ್ರಿಯಿಸಿದ ಲಿನ್ `ಈ ಕ್ರಮಗಳು ಅಂತರಾಷ್ಟ್ರೀಯ ಸಾಮಾನ್ಯ ಅಭ್ಯಾಸಕ್ಕೆ ಅನುಗುಣವಾಗಿದ್ದು ಜಾಗತಿಕ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಯ ರಕ್ಷಣೆಯ ಉದ್ದೇಶ ಮತ್ತು ಇತರ ಅಂತರಾಷ್ಟ್ರೀಯ ಬದ್ಧತೆಗಳನ್ನು ಈಡೆರಿಸುವ ಗುರಿ ಹೊಂದಿದೆ' ಎಂದಿದ್ದಾರೆ.