ಲಂಡನ್ ನಲ್ಲಿ ಹಸೀನಾ ಬೆಂಬಲಿಗರು–NCP ಕಾರ್ಯಕರ್ತರ ನಡುವೆ ಸಂಘರ್ಷ; ಐವರಿಗೆ ಗಾಯ
ನಹೀದ್ ಇಸ್ಲಾಂ ಕಾರ್ಯಕ್ರಮಕ್ಕೆ ವಿರೋಧ; ಅತಿಥಿಗಳ ಮೇಲೆ ಮೊಟ್ಟೆ, ನೀರಿನ ಬಾಟಲಿ ಎಸೆತ
Photo Credit : X
ಲಂಡನ್: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಬೆಂಬಲಿಗರು ಮತ್ತು ಅವರ ಸರಕಾರದ ಪತನಕ್ಕೆ ಕಾರಣವಾದ ವಿದ್ಯಾರ್ಥಿ ಚಳವಳಿಯ ನಾಯಕರ ಪಕ್ಷವಾದ ನ್ಯಾಷನಲ್ ಸಿಟಿಝನ್ ಪಾರ್ಟಿ (NCP) ಕಾರ್ಯಕರ್ತರ ನಡುವಿನ ರಾಜಕೀಯ ಸಂಘರ್ಷ ಇದೀಗ ಬ್ರಿಟನ್ ಗೂ ವ್ಯಾಪಿಸಿದೆ. ಲಂಡನ್ ನ ರೋಮ್ ಫೋರ್ಡ್ ನಲ್ಲಿ ಸೋಮವಾರ NCP ಮುಖ್ಯಸ್ಥ ನಹೀದ್ ಇಸ್ಲಾಂ ಅವರ ಗೌರವಾರ್ಥ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಅವಾಮಿ ಲೀಗ್ ಮತ್ತು NCP ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ನಾಲ್ಕರಿಂದ ಐದು ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ನಹೀದ್ ಅವರು ಸ್ಥಳದಿಂದ ತರಾತುರಿಯಲ್ಲಿ ನಿರ್ಗಮಿಸಿದ್ದಾರೆ.
ಬಾಂಗ್ಲಾದೇಶ ಸಂಸತ್ತಿನ ಢಾಕಾ-11 ಕ್ಷೇತ್ರದ ಸದಸ್ಯರಾಗಿರುವ ನಹೀದ್ ಅವರ ಗೌರವಾರ್ಥ ಬ್ರಿಟಿಷ್-ಬಾಂಗ್ಲಾದೇಶಿ ಸಮುದಾಯದವರು ಮೇಫೇರ್ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ನ.16ರ ಸೋಮವಾರ ರಾತ್ರಿ ಕಾರ್ಯಕ್ರಮದ ಹೊರಭಾಗದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು 'ಢಾಕಾ ಟ್ರಿಬ್ಯೂನ್' ಮತ್ತು 'ಪ್ರೊಥೋಮ್ ಅಲೋ' ವರದಿ ಮಾಡಿವೆ.
2024ರ ಜುಲೈನಲ್ಲಿ ಬಾಂಗ್ಲಾದೇಶದಲ್ಲಿ ಸರಕಾರಿ ಉದ್ಯೋಗಗಳಲ್ಲಿನ ಮೀಸಲಾತಿ (ಕೋಟಾ) ಪದ್ಧತಿ ವಿರೋಧಿಸಿ ವಿದ್ಯಾರ್ಥಿಗಳು ಆರಂಭಿಸಿದ ಚಳವಳಿಯಲ್ಲಿ ನಹೀದ್ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಆರಂಭದಲ್ಲಿ ಮೀಸಲಾತಿ ವಿರೋಧಕ್ಕೆ ಸೀಮಿತವಾಗಿದ್ದ ಪ್ರತಿಭಟನೆ ಕ್ರಮೇಣ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರಕಾರದ ವಿರುದ್ಧ ರಾಷ್ಟ್ರವ್ಯಾಪಿ ದಂಗೆಯಾಗಿ ರೂಪುಗೊಂಡಿತ್ತು. ಈ ದಂಗೆಯ ಪರಿಣಾಮ ಹಸೀನಾ ಸರಕಾರ ಪತನಗೊಂಡಿತ್ತು. ಅವರು ದೇಶ ತೊರೆದು ಪಲಾಯನ ಮಾಡಿದ್ದರು. ಬಳಿಕ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರಕಾರ ರಚನೆಯಾಗಿತ್ತು. ಈ ಬೆಳವಣಿಗೆಗಳಲ್ಲಿ ನಹೀದ್ ಸೇರಿದಂತೆ ವಿದ್ಯಾರ್ಥಿ ನಾಯಕರು ಪ್ರಮುಖ ಪಾತ್ರ ವಹಿಸಿದ್ದರು.
ಬಳಿಕ ನಹೀದ್ ನ್ಯಾಷನಲ್ ಸಿಟಿಝನ್ ಪಾರ್ಟಿ (NCP) ಸ್ಥಾಪಿಸಿದರು. ಜಮಾತ್-ಎ-ಇಸ್ಲಾಮಿ ಬಾಂಗ್ಲಾದೇಶ ನೇತೃತ್ವದ 11 ಪಕ್ಷಗಳ ಮೈತ್ರಿಕೂಟದ ಭಾಗವಾಗಿ NCP ಸಂಸದೀಯ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಚುನಾವಣೆಯಲ್ಲಿ ಎಂಟು ಸ್ಥಾನಗಳನ್ನು ಗೆದ್ದಿರುವ ಪಕ್ಷ, ಪ್ರಸ್ತುತ ಪ್ರಧಾನಿ ತಾರಿಕ್ ರೆಹಮಾನ್ ನೇತೃತ್ವದ BNP ಸರಕಾರದ ವಿರುದ್ಧ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅವಾಮಿ ಲೀಗ್ ಕಾರ್ಯಕರ್ತರು ಮತ್ತು ಹಸೀನಾ ಬೆಂಬಲಿಗರು ಮೇಫೇರ್ ಹಾಲ್ ನ ಹೊರಗೆ ಜಮಾಯಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಅತಿಥಿಗಳ ಮೇಲೆ ಮೊಟ್ಟೆ ಮತ್ತು ನೀರಿನ ಬಾಟಲಿಗಳನ್ನು ಎಸೆದ ಅವರು, ಹಾಲ್ ನ ಹೊರಗಿದ್ದವರೊಂದಿಗೆ ವಾಗ್ವಾದ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಆಯೋಜಕರು ತಿಳಿಸಿದ್ದಾರೆ ಎಂದು 'ಢಾಕಾ ಟ್ರಿಬ್ಯೂನ್' ವರದಿ ಮಾಡಿದೆ.
ಕಾರ್ಯಕ್ರಮ ಮುಗಿದ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಅವಾಮಿ ಲೀಗ್ ಮತ್ತು NCP ಕಾರ್ಯಕರ್ತರು ಪರಸ್ಪರ ಬೆನ್ನಟ್ಟಿಕೊಂಡು ಹಾಲ್ ನ ಹಿಂಭಾಗದ ರಸ್ತೆಯಲ್ಲಿ ಹೊಡೆದಾಡಿಕೊಂಡರು. ಸುಮಾರು 20 ನಿಮಿಷಗಳ ಕಾಲ ಬೀದಿ ಸಂಘರ್ಷ ಮುಂದುವರಿಯಿತು. ಜನರನ್ನು ಚದುರಿಸಿ ಸುವ್ಯವಸ್ಥೆ ಪುನಃಸ್ಥಾಪಿಸಲು ಲಂಡನ್ ಪೊಲೀಸರು ಪದೇಪದೇ ಲಾಠಿ ಪ್ರಹಾರ ನಡೆಸಬೇಕಾಯಿತು ಎಂದು 'ಢಾಕಾ ಟ್ರಿಬ್ಯೂನ್' ವರದಿ ತಿಳಿಸಿದೆ.
ಘಟನೆಯಲ್ಲಿ ಕನಿಷ್ಠ ನಾಲ್ವರು ಗಾಯಗೊಂಡು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು 'ಢಾಕಾ ಟ್ರಿಬ್ಯೂನ್' ವರದಿ ಮಾಡಿದೆ. ಐವರು ಗಾಯಾಳುಗಳನ್ನು ಲಂಡನ್ ನ ಕಿಂಗ್ಸ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು 'ಪ್ರೊಥೋಮ್ ಅಲೋ' ವರದಿ ತಿಳಿಸಿದೆ.
ಪ್ರತಿಭಟನಾಕಾರರೊಂದಿಗೆ ನೇರ ಸಂಘರ್ಷಕ್ಕೆ ಇಳಿಯುವುದನ್ನು ನಹೀದ್ ತಪ್ಪಿಸಿಕೊಂಡರು. ಕಾರ್ಯಕ್ರಮ ಆರಂಭವಾಗುವುದಕ್ಕೆ ಮೂರು ಗಂಟೆಗಳ ಮೊದಲೇ ಅವರು ಮೇಫೇರ್ ಹಾಲ್ ಗೆ ಆಗಮಿಸಿದ್ದರು. ಪ್ರತಿಭಟನಾಕಾರರು ಹಾಲ್ ನ ಮುಂಭಾಗದಲ್ಲಿ ಜಮಾಯಿಸುತ್ತಿದ್ದಂತೆ ಅವರು ಹಿಂಭಾಗದ ಪ್ರವೇಶದ್ವಾರದ ಮೂಲಕ ಹೊರನಡೆದರು ಎಂದು 'ಢಾಕಾ ಟ್ರಿಬ್ಯೂನ್' ವರದಿ ಮಾಡಿದೆ.
ಮಂಗಳವಾರ ಫೇಸ್ಬುಕ್ ನಲ್ಲಿ ಹೇಳಿಕೆ ಪ್ರಕಟಿಸಿರುವ ನಹೀದ್, ದೇಶದಿಂದ ಪಲಾಯನ ಮಾಡಿರುವ ಅವಾಮಿ ಲೀಗ್ ಕಾರ್ಯಕರ್ತರು ಬಾಂಗ್ಲಾದೇಶದ ಸಾಮಾನ್ಯ ವಲಸಿಗರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
'ಈ ಹೇಡಿತನದ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಪ್ರತಿಭಟಿಸುತ್ತೇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ' ಎಂದು ಅವರು ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಪ್ರತಿನಿಧಿಗಳು ಮತ್ತು ಪತ್ರಕರ್ತರು ಹಿಂಸಾಚಾರವನ್ನು ವೀಕ್ಷಿಸಿದ್ದಾರೆ ಎಂದೂ ತಿಳಿಸಿದ್ದಾರೆ. ಘಟನೆಯ ಕುರಿತು ತ್ವರಿತ, ನಿಷ್ಪಕ್ಷಪಾತ ಮತ್ತು ಪರಿಣಾಮಕಾರಿ ತನಿಖೆ ನಡೆಸುವಂತೆ ಯುಕೆ ಸರಕಾರಕ್ಕೆ ಅವರು ಒತ್ತಾಯಿಸಿದ್ದಾರೆ.
ಅವಾಮಿ ಲೀಗ್ ಅನ್ನು 'ಫ್ಯಾಸಿಸ್ಟ್ ರಾಜಕೀಯ ಶಕ್ತಿ' ಎಂದು ಬಣ್ಣಿಸಿರುವ ನಹೀದ್, ಆ ಪಕ್ಷದೊಂದಿಗೆ ಸಂಬಂಧ ಹೊಂದಿರುವವರು ವಿದೇಶಿ ನೆಲದಲ್ಲಿಯೂ ಹಿಂಸೆ ಮತ್ತು ಬೆದರಿಕೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶೇಖ್ ಹಸೀನಾ ಅವರು ಡಿಸೆಂಬರ್ ನಲ್ಲಿ ಬಾಂಗ್ಲಾದೇಶಕ್ಕೆ ಮರಳಲಿದ್ದಾರೆ ಎಂಬ ನಿರೀಕ್ಷೆಯ ನಡುವೆ ದೇಶದ ವಿವಿಧೆಡೆ ಅವಾಮಿ ಲೀಗ್ ಕಾರ್ಯಕರ್ತರು ಮತ್ತೆ ಸಕ್ರಿಯರಾಗಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಲಂಡನ್ ನ ರೋಮ್ಫೋರ್ಡ್ನಲ್ಲಿ ಈ ಸಂಘರ್ಷ ನಡೆದಿದೆ.
ರವಿವಾರ ಹಸೀನಾ ಅವರ ಜನ್ಮಸ್ಥಳವಾದ ಗೋಪಾಲಗಂಜ್ ಜಿಲ್ಲೆಯಲ್ಲಿ ನೂರಾರು ಅವಾಮಿ ಲೀಗ್ ಸದಸ್ಯರು ಕೋಲುಗಳು ಮತ್ತು ಹರಿತವಾದ ಆಯುಧಗಳೊಂದಿಗೆ ಜಮಾಯಿಸಿದ್ದರು. ಈ ವೇಳೆ ಪೊಲೀಸರೊಂದಿಗೆ ಸಂಘರ್ಷ ನಡೆದಿತ್ತು. ಅಲ್ಲದೆ, ಬಿಎನ್ಪಿಗೆ ಸಂಬಂಧಿಸಿದ ಹಲವು ಆಸ್ತಿಗಳು ಮತ್ತು ಪಕ್ಷದ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ವರದಿಯಾಗಿದೆ.