UN-OIC ಸಹಕಾರ| ಕರಡು ನಿರ್ಣಯದ ಸಮಾಲೋಚನೆಗಳಿಂದ ಹೊರಗಿಟ್ಟಿದ್ದ ತುರ್ಕಿಯೆಗೆ ಭಾರತ ತರಾಟೆ
ಯೋಜನಾ ಪಟೇಲ್ | Photo Credit : X
ವಿಶ್ವಸಂಸ್ಥೆ: ವಿಶ್ವಸಂಸ್ಥೆ (ಯುಎನ್) ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ನಡುವಿನ ಸಹಕಾರದ ಕುರಿತು ಕರಡು ನಿರ್ಣಯದ ಸಮಾಲೋಚನೆಗಳಿಂದ ಹೊಸದಿಲ್ಲಿ ಮತ್ತು ಇತರ ಸದಸ್ಯ ರಾಷ್ಟ್ರಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟಿದ್ದ ತುರ್ಕಿಯೆದ ಕ್ರಮವನ್ನು ಭಾರತವು ತೀವ್ರವಾಗಿ ಆಕ್ಷೇಪಿಸಿದೆ ಮತ್ತು ಮಹಾಸಭೆಯಲ್ಲಿ ನಡೆದ ಮತದಾನದಲ್ಲಿ ಕರಡಿನ ವಿರುದ್ಧ ಮತ ಚಲಾಯಿಸಿದೆ.
ಇರಾಕ್ ಮಂಡಿಸಿದ ‘ವಿಶ್ವಸಂಸ್ಥೆ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆ ನಡುವಿನ ಸಹಕಾರ’ ಕರಡು ನಿರ್ಣಯವು ಸೋಮವಾರ 112 ಮತಗಳಿಂದ ಅಂಗೀಕಾರಗೊಂಡಿದೆ. ಭಾರತ, ಆರ್ಮೇನಿಯಾ, ಸೈಪ್ರಸ್, ಗ್ರೀಸ್, ಇಸ್ರೇಲ್ ಮತ್ತು ಅಮೆರಿಕ ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದರೆ 39 ದೇಶಗಳು ಮತದಾನದಿಂದ ದೂರವುಳಿದಿದ್ದವು. ಕರಡು ನಿರ್ಣಯ ಕುರಿತು ಚರ್ಚೆ ಮತ್ತು ಮಾತುಕತೆಗಳಲ್ಲಿ ತುರ್ಕಿಯೆ ಸಂಯೋಜಕನಾಗಿ ಕಾರ್ಯನಿರ್ವಹಿಸಿತ್ತು.
ಭಾರತದ ಜೊತೆಗೆ ಸೈಪ್ರಸ್ ಮತ್ತು ಗ್ರೀಸ್ ಸೇರಿದಂತೆ ಇತರ ದೇಶಗಳು ಕೂಡ ಕರಡು ಮಾತುಕತೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ತುರ್ಕಿಯೆದ ಪಾರದರ್ಶಕತೆಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಮನೊಭಾವದ ಒಳಗೊಳ್ಳುವಿಕೆಯ ಕೊರತೆಯನ್ನು ತೀವ್ರವಾಗಿ ಖಂಡಿಸಿದವು.
ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ ಯೋಜನಾ ಪಟೇಲ್ ಅವರು, ನಿರ್ಣಯದ ಕರಡನ್ನು ಹಂತ ಹಂತವಾಗಿ ಪ್ರಸಾರ ಮಾಡುವಾಗ ಒಐಸಿಯ ಖಾಯಂ ವೀಕ್ಷಕ ಸಮಿತಿಯು ಭಾರತೀಯ ನಿಯೋಗ ಮತ್ತು ಹಲವು ದೇಶಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟಿತ್ತು ಎಂದು ಆರೋಪಿಸಿದರು. ತುರ್ಕಿಯೆ ಅನುಸರಿಸಿದ ಕಾರ್ಯವಿಧಾನಗಳನ್ನು ಖಂಡಿಸಿದ ಅವರು, ಇದು ಕೆಲವು ದೇಶಗಳ ಸ್ವಂತ ಅಜೆಂಡಾಗಳನ್ನು ಈಡೇರಿಸಿಕೊಳ್ಳಲು ಮಾಡಿರುವ ಕೆಟ್ಟ ಸಂಪ್ರದಾಯವಾಗಿದೆ ಎಂದು ಬಣ್ಣಿಸಿದರು.
ಈ ಕುರಿತು ತನಿಖೆ ನಡೆಸಿ ಭವಿಷ್ಯದಲ್ಲಿ ಇದು ಮರುಕಳಿಸದಂತೆ ತಡೆಯಲು ಯುಎನ್ ಮಹಾಸಭೆಯ ಅಧ್ಯಕ್ಷರನ್ನು ಭಾರತ ಒತ್ತಾಯಿಸಿದೆ.
ಇದಲ್ಲದೆ, ಜುಲೈನಲ್ಲಿ ಇಸ್ಲಾಮಾಬಾದ್ನಲ್ಲಿ ನಡೆದ ಒಐಸಿ ಸಮ್ಮೇಳನದ ಘೋಷಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕುರಿತು ಮಾಡಲಾದ ಅನಗತ್ಯ ಹಾಗೂ ವಾಸ್ತವಿಕವಾಗಿ ತಪ್ಪಾದ ಉಲ್ಲೇಖಗಳನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ. ಪಾಕಿಸ್ತಾನದ ಕುಮ್ಮಕ್ಕಿನಿಂದ ಒಐಸಿ ವೇದಿಕೆಯು ಭಾರತದ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ನಿರಂತರವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಭಾರತ ಆಕ್ಷೇಪಿಸಿತು. ಸದಸ್ಯ ರಾಷ್ಟ್ರಗಳು ತಮ್ಮ ಧರ್ಮವನ್ನು ಲೆಕ್ಕಿಸದೆ ತಮ್ಮ ನಾಗರಿಕರ ಹಿತಾಸಕ್ತಿಗಳನ್ನು ನೋಡಿಕೊಳ್ಳುತ್ತವೆ ಎಂದ ಪಟೇಲ್, ಕೇವಲ ಒಂದೇ ಧರ್ಮದ ಅನುಯಾಯಿಗಳು ಮಾತ್ರ ತಮ್ಮ ನಂಬಿಕೆಯುಳ್ಳವರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯ ಎಂಬ ಪ್ರತಿಗಾಮಿ ದೃಷ್ಟಿಕೋನಗಳಿಗೆ ಇಂದಿನ ಜಗತ್ತಿನಲ್ಲಿ ಯಾವುದೇ ಸ್ಥಾನವಿಲ್ಲ ಎಂದರು.
ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಭಾರತ, ಒಐಸಿಯು ಸುಳ್ಳು ಮತ್ತು ಆಧಾರರಹಿತ ಆರೋಪಗಳ ಮೂಲಕ ತನ್ನ ನಿರ್ಣಯಗಳು ಮತ್ತು ಘೋಷಣೆಗಳನ್ನು ಆಯುಧವನ್ನಾಗಿ ಮಾಡಿಕೊಳ್ಳಲು ಮತ್ತೊಮ್ಮೆ ಒಂದು ಸದಸ್ಯ ರಾಷ್ಟ್ರಕ್ಕೆ ಅವಕಾಶ ಮಾಡಿಕೊಟ್ಟಿರುವುದು ವಿಷಾದಕರ ಎಂದು ತಿಳಿಸಿದೆ.
ಪಾಕಿಸ್ತಾನವು 57 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಒಐಸಿಯ ಸ್ಥಾಪಕ ಮತ್ತು ಪ್ರಮುಖ ಸದಸ್ಯ ರಾಷ್ಟ್ರವಾಗಿದೆ.
ಒಐಸಿಯು ತನ್ನ ನಿರ್ಣಯಗಳಲ್ಲಿ ಸಂಕುಚಿತ ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು, ವಸ್ತುನಿಷ್ಠತೆ ಮತ್ತು ಪರಸ್ಪರ ಗೌರವದ ತತ್ವಗಳನ್ನು ಎತ್ತಿಹಿಡಿಯಬೇಕು ಎಂದೂ ಭಾರತವು ಆಗ್ರಹಿಸಿದೆ.