ಅಕ್ರಮ ಹಣ ವರ್ಗಾವಣೆ ಪ್ರಕರಣ | ಈಡಿಯಿಂದ ಯುಕೋ ಬ್ಯಾಂಕ್ ನ ಮಾಜಿ ಸಿಎಂಡಿ ಸುಬೋಧ್ ಕುಮಾರ್ ಗೋಯಲ್ ಬಂಧನ
Photo credit: thenewsminute.com
ಹೊಸದಿಲ್ಲಿ: ಕೋಲ್ಕತ್ತಾ ಮೂಲದ ಕಂಪೆನಿಗೆ ಸಂಬಂಧಿಸಿದ 6,200 ಕೋಟಿ ರೂ.ಗೂ ಹೆಚ್ಚು ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಯುಕೋ ಬ್ಯಾಂಕ್ ನ ಮಾಜಿ ಸಿಎಂಡಿ(ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ) ಸುಬೋಧ್ ಕುಮಾರ್ ಗೋಯಲ್ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ (ಈಡಿ) ಸೋಮವಾರ ತಿಳಿಸಿದೆ.
ಕಾನ್ಕಾಸ್ಟ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ (ಸಿಎಸ್ಪಿಎಲ್) ಮತ್ತು ಇತರರ ವಿರುದ್ಧ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಗೋಯಲ್ ಅವರನ್ನು ಮೇ 16 ರಂದು ಇಲ್ಲಿನ ಅವರ ನಿವಾಸದಿಂದ ಬಂಧಿಸಿದೆ ಎಂದು ತಿಳಿದು ಬಂದಿದೆ.
ಮೇ 17 ರಂದು ಕೋಲ್ಕತ್ತಾದ ವಿಶೇಷ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಗಿದೆ. ನ್ಯಾಯಾಲಯವು ಅವರನ್ನು ಮೇ 21 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಕಳುಹಿಸಿದೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ಏಪ್ರಿಲ್ ನಲ್ಲಿ ಗೋಯಲ್ ಮತ್ತು ಇತರ ಕೆಲವರರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿತ್ತು.
CSPL ಗೆ ನೀಡಿರುವ 6210.72 ಕೋಟಿ ರೂ.ಗಳ ಸಾಲಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್ ಐ ಆರ್ ದಾಖಲಿಸಿದ ನಂತರ ಈ ಪ್ರಕರಣ ಮುನ್ನೆಲೆಗೆ ಬಂದಿತ್ತು. ಮಂಜೂರಾತಿಯ ನಂತರ ಸಾಲದ ಮೊತ್ತವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿತ್ತು ಎಂದು ಆರೋಪಿಸಲಾಗಿದೆ.
ಗೋಯೆಲ್ ಯುಕೋ ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ, ದೊಡ್ಡ ಸಾಲ ಸೌಲಭ್ಯಗಳನ್ನು CSPL ಗೆ "ಮಂಜೂರು" ಮಾಡಲಾಗಿತ್ತು. ನಂತರ ಸಾಲಗಾರರ ಗುಂಪು ಅದನ್ನು ಬೇರೆಡೆಗೆ ಬಳಸಿಕೊಂಡಿತು ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.
ಇದಕ್ಕೆ ಪ್ರತಿಯಾಗಿ ಗೋಯೆಲ್ ಅವರಿಗೆ CSPLಗೆ ಕಾನೂನು ಬದ್ಧತೆಯ ಮುಖವಾಡ ಹಾಕಿ ವಿವಿಧ ರೂಪದಲ್ಲಿ ಸಂತೃಪ್ತಿ ಪಡೆಸುವ ಕಾರ್ಯಗಳು ನಡೆದವು ಎಂದು ಈಡಿ ಆರೋಪಿಸಿದೆ.
"ಗೋಯೆಲ್ ಅವರು ಹಣದ ಕ್ರಿಮಿನಲ್ ಮೂಲವನ್ನು ಮರೆಮಾಚಲು ಶೆಲ್ ಕಂಪೆನಿ(ಬೋಗಸ್ ಕಂಪೆನಿ)ಗಳು, ಛಾಯಾ ವ್ಯಕ್ತಿಗಳು ಮತ್ತು ಕುಟುಂಬ ಸದಸ್ಯರ ಮೂಲಕ ನಗದು, ಸ್ಥಿರಾಸ್ತಿಗಳು, ಐಷಾರಾಮಿ ವಸ್ತುಗಳು, ಹೋಟೆಲ್ ಬುಕಿಂಗ್ ಇತ್ಯಾದಿಗಳನ್ನು ಪಡೆದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ" ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಈ ಶೆಲ್ ಘಟಕಗಳು ಗೋಯೆಲ್ ಮತ್ತು ಅವರ ಕುಟುಂಬ ಸದಸ್ಯರ ಒಡೆತನದಲ್ಲಿದೆ ಅಥವಾ ನಿಯಂತ್ರಿಸಲ್ಪಡುತ್ತಿದೆ. ಶೆಲ್ ಅಥವಾ ಬೋಗಸ್ ಕಂಪೆನಿಗಳ ಮೂಲಕ ಸ್ವಾಧೀನಪಡಿಸಿಕೊಂಡಿರುವ ಹಲವಾರು ಆಸ್ತಿಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಈಡಿ ಹೇಳಿದೆ.
ಜಾರಿ ನಿರ್ದೇಶನಾಲಯವು ಅವರ ವಿರುದ್ಧ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯೆಗಾಗಿ ಗೋಯೆಲ್ ಅಥವಾ ಅವರ ವಕೀಲರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ.