ಕೊಲಂಬಿಯಾ ವಿವಿಯಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆ : 65 ವಿದ್ಯಾರ್ಥಿಗಳ ಅಮಾನತು
Update: 2025-05-10 21:22 IST
X @BenTelAviv
ನ್ಯೂಯಾರ್ಕ್: ಈ ವಾರದ ಆರಂಭದಲ್ಲಿ ಕೊಲಂಬಿಯಾ ವಿವಿಯ ಲೈಬ್ರೆರಿಯ ಒಳಗೆ ನಡೆದಿದ್ದ ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 65ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಕ್ತಾರರು ಶುಕ್ರವಾರ ಹೇಳಿದ್ದಾರೆ.
65ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಾತ್ಕಾಲಿಕ ಅಮಾನತುಗೊಳಿಸಲಾಗಿದ್ದು ಅಂಗಸಂಸ್ಥೆಗಳಾದ ಬರ್ನಾರ್ಡ್ ಕಾಲೇಜಿನಂತಹ ಸಂಸ್ಥೆಗಳ ಇತರ 33 ವಿದ್ಯಾರ್ಥಿಗಳು ವಿವಿಯ ಕ್ಯಾಂಪಸ್ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ತಾತ್ಕಾಲಿಕ ಅಮಾನತು ಎಂದರೆ, ಅಂತಹ ವಿದ್ಯಾರ್ಥಿ ವಿವಿಯ ಕ್ಯಾಂಪಸ್‍ಗೆ ಆಗಮಿಸುವಂತಿಲ್ಲ, ತರಗತಿಗೆ ಹಾಜರಾಗುವಂತಿಲ್ಲ ಅಥವಾ ವಿವಿಯ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ತನಿಖೆ ನಡೆದು ಮುಂದಿನ ಆದೇಶದವರೆಗೆ ಅಮಾನತು ಜಾರಿಯಲ್ಲಿರುತ್ತದೆ ಎಂದು ಕೊಲಂಬಿಯಾ ವಿವಿಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.