ನೇಪಾಳ ಸಂಪೂರ್ಣ ಸುರಕ್ಷಿತ : ಪ್ರವಾಸಿಗರಿಗೆ ಆಹ್ವಾನ
PC | timesofindia
ಕಠ್ಮಂಡು: ನೇಪಾಳದಲ್ಲಿ ಇತ್ತೀಚಿಗೆ ನಡೆದ ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭವಾಗಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರಿ ಹಿನ್ನಡೆಯಾಗುವ ಭೀತಿಯಿಂದ ನೇಪಾಳ ಪ್ರಜೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿಗರು ಹಿಮಾಲಯನ್ ರಾಷ್ಟ್ರಕ್ಕೆ ಭೇಟಿ ನೀಡುವಂತೆ ಮನವಿ ಮಾಡುತ್ತಿದ್ದಾರೆ. "ಪ್ರವಾಸಿಗರಿಗೆ ನೇಪಾಳ ಸಂಪೂರ್ಣ ಸುರಕ್ಷಿತ. ದೇಶ ಇದೀಗ ನಿಧಾನವಾಗಿ ಒಗ್ಗೂಡುತ್ತಿದೆ" ಎಂದು ಹೇಳಿದ್ದಾರೆ.
ಎಲ್ಲ ಪ್ರಮುಖ ನಗರಗಳ ಮತ್ತು ವ್ಯಾಪಾರ ಕೇಂದ್ರಗಳ ಯುವಕರು ಶನಿವಾರ ಜಾಲತಾಣ ಖಾತೆಗಳ ಮೂಲಕ ಒಕ್ಕೊರಲ ಮನವಿ ಮಾಡುತ್ತಿದ್ದು, "ನಡೆಯುತ್ತಿರುವ ಪ್ರತಿಭಟನೆಗಳು ಸರ್ಕಾರದ ವಿರುದ್ಧ; ಪ್ರವಾಸಿಗರನ್ನು ಘಾಸಿಗೊಳಿಸುವ ಯಾವುದೇ ಉದ್ದೇಶ ಇಲ್ಲ" ಎಂಬ ಸ್ಪಷ್ಟ ಸಂದೇಶ ರವಾನಿಸುತ್ತಿದ್ದಾರೆ. ಇದರ ಮಧ್ಯೆ ನೇಪಾಳದ ಪ್ರವಾಸೋದ್ಯಮ ಮಂಡಳಿ ಹೇಳಿಕೆ ನೀಡಿ ಪ್ರತಿಭಟನೆ ವೇಳೆ ಅಂದರೆ ಸೆ.8 ಅಥವಾ ಆ ಬಳಿಕ ಪ್ರವಾಸಿ ವೀಸಾ ಅವಧಿ ಮೀರಿದ್ದರೆ ಅಂಥ ಪ್ರವಾಸಿಗರ ವೀಸಾಗಳನ್ನು ಉಚಿತವಾಗಿ ನವೀಕರಿಸುವುದಾಗಿ ಪ್ರಕಟಿಸಿದೆ.
10 ಲಕ್ಷಕ್ಕೂ ಅನುಯಾಯಿಗಳನ್ನು ಹೊಂದಿರುವ 'ರುಟೀನ್ ಆಫ್ ನೇಪಾಳ ಬಂದ' ಹೆಸರಿನ ಎಕ್ಸ್ ಖಾತೆ, "ಪ್ರವಾಸಿಗರಿಗೆ ಮನವಿ... ನೇಪಾಳ ಸಹಜತೆಗೆ ಮರಳುತ್ತಿದೆ. ದಯವಿಟ್ಟು ನಮ್ಮ ಸುಂದರ ದೇಶಕ್ಕೆ ಭೇಟಿ ನೀಡಿ. ಹಾಗೆ ಮಾಡಲು ಸಕಾರಣ ಇದೆ. ಈ ಸಮಯದಲ್ಲಿ ನಮ್ಮ ಪ್ರವಾಸೋದ್ಯಮ ಉತ್ತೇಜಿಸುವಂತೆ ವಿದೇಶಿಯರಿಗೆ ಮನವಿ ಮಾಡುತ್ತಿದ್ದೇವೆ" ಎಂಬ ಶೀರ್ಷಿಕೆಯೊಂದಿಗೆ ಕೆಲ ವಿದೇಶಿ ಪ್ರವಾಸಿಗರು ನೇಪಾಳದ ಸಾಂಪ್ರದಾಯಿಕ ಸಂಗೀತಕ್ಕೆ ಹೆಜ್ಜೆಹಾಕುವ ಚಿತ್ರವನ್ನು ಪೋಸ್ಟ್ ಮಾಡಿದೆ.
ಮತ್ತೊಬ್ಬ ನೇಪಾಳಿ ಪ್ರಜೆ ತಮ್ಮ ಇನ್‍ಸ್ಟಾಗ್ರಾಂ ಪೇಜ್‍ನಲ್ಲಿ, "ನೇಪಾಳ ಸದಾ ಪ್ರವಾಸಿಗರನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿದೆ. ನಾವು ಸಂಪತ್ತಿನಲ್ಲಿ ಬಡವರು ಇರಬಹುದು, ಆದರೆ ಅತಿಥಿಗಳಿಗೆ ಪ್ರೀತಿ ತೋರಿಸುವಲ್ಲಿ ಶ್ರೀಮಂತರು. ನಮ್ಮ ಸುಂದರ ದೇಶದ ಬಗ್ಗೆ ಎಂದಿಗೂ ಚಿಂತಿಸುವ ಅಗತ್ಯವಿಲ್ಲ" ಎಂದು ಬರೆದಿದ್ದಾರೆ.