×
Ad

ಮೋದಿಯನ್ನು ಟೀಕಿಸಿದ್ದ ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಝೋಹ್ರಾನ್ ಮಮ್ದಾನಿ!

Update: 2025-06-25 22:34 IST

PC : financialexpress.com

ನ್ಯೂಯಾರ್ಕ್: ಯುವ ಎಡಪಂಥೀಯ ಅಭ್ಯರ್ಥಿ ಝೊಹ್ರಾನ್ ಮಮ್ದಾನಿ 2025ರ ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವರು ಈ ಹಿಂದೆ ನೀಡಿದ್ದ ಹೇಳಿಕೆಯ ಹಳೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊ ಟೀಕೆ ಮತ್ತು ಬೆಂಬಲಕ್ಕೆ ಕಾರಣವಾಗಿದೆ.

ಉಗಾಂಡಾ ಮೂಲದ ಮಹಮೂದ್ ಮಮ್ದಾನಿ ಹಾಗೂ ಭಾರತೀಯ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರ ಪುತ್ರ ಝೋಹ್ರಾನ್ ಮಮ್ದಾನಿ, ಹಿರಿಯ ರಾಜಕಾರಣಿ ಆಂಡ್ರ್ಯೂ ಕ್ಯುಮೊ ಅವರನ್ನು ಸೋಲಿಸಿ ಡೆಮಾಕ್ರಟಿಕ್ ಪಕ್ಷದ ಮೇಯರ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಅವರು ನ್ಯೂಯಾರ್ಕ್ ನಗರದ ಮೊದಲ ಭಾರತೀಯ ಮೂಲದ ಮುಸ್ಲಿಂ ಮೇಯರ್ ಆಗುವ ಹಾದಿಯಲ್ಲಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಝೋಹ್ರಾನ್ ಮಮ್ದಾನಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಹೋಲಿಸಿದ್ದರು.

ಮಮ್ದಾನಿ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಮ್ದಾನಿಗೆ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತೀರಾ?  ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ರ‍್ಯಾಲಿಯ ಸಂದರ್ಭದಲ್ಲಿ ಮೋದಿಯ ಜೊತೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುತ್ತೀರಾ ಎಂದು ಕೇಳಿದಾಗ ಮಮ್ದಾನಿ ಇದನ್ನು ದೃಢವಾಗಿ ನಿರಾಕರಿಸಿದ್ದರು.

2002ರ ಗುಜರಾತ್ ಗಲಭೆಗಳನ್ನು ಉಲ್ಲೇಖಿಸಿ ವಿವಾದಾತ್ಮಕ ಹೋಲಿಕೆಯನ್ನು ಮಾಡುವ ಮೂಲಕ ತಮ್ಮ ನಿಲುವಿಗೆ ವಿವರಣೆಯನ್ನು ನೀಡಿದ್ದರು.

ಗುಜರಾತ್‌ನಲ್ಲಿ ಮುಸ್ಲಿಮರ ಸಾಮೂಹಿಕ ಹತ್ಯೆಯನ್ನು ಸಂಘಟಿಸಲು ಸಹಾಯ ಮಾಡಿದ ವ್ಯಕ್ತಿ ಇವರು ಎಂದು ಮಮ್ದಾನಿ ವಿಡಿಯೋದಲ್ಲಿ ಹೇಳಿದ್ದಾರೆ. ನಾವು ಬೆಂಜಮಿನ್ ನೆತನ್ಯಾಹು ಅವರನ್ನು ನೋಡುವ ರೀತಿಯಲ್ಲಿಯೇ ನೋಡಬೇಕಾದ ವ್ಯಕ್ತಿ ಇವರು, ́ಯುದ್ಧ ಅಪರಾಧಿʼ ಎಂದು  ಹೇಳಿದ್ದರು.

ಅವರ ಈ ಹೇಳಿಕೆ ಎಕ್ಸ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರತೀಯ ಮೂಲದ ಅಮೆರಿಕನ್ನರು ಮತ್ತು ರಾಜಕೀಯ ವೀಕ್ಷಕರ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

ಕೆಲವರು ಮಮ್ದಾನಿ ಅವರ ದೃಢವಾದ ಹೇಳಿಕೆಯನ್ನು ನೀಡಿದ್ದಾರೆ ಎಂದು ಶ್ಲಾಘಿಸಿದರೆ, ಇನ್ನು ಕೆಲವರು ಈ ಹೇಳಿಕೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕನಿಗೆ ತೋರಿದ ಅಗೌರವ ಎಂದು ಟೀಕಿಸಿದ್ದಾರೆ.

2025ರ ನವೆಂಬರ್‌ನಲ್ಲಿ ನ್ಯೂಯಾರ್ಕ್ ಮೇಯರ್ ಚುನಾವಣೆ ನಡೆಯಲಿದೆ. ಸ್ವತಂತ್ರ ಅಭ್ಯರ್ಥಿ, ಹಾಲಿ ಮೇಯರ್ ಎರಿಕ್ ಆಡಮ್ಸ್ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರ ವಿರುದ್ಧ ಝೋಹ್ರಾನ್ ಮಮ್ದಾನಿ ಸ್ಪರ್ಧಿಸಲಿದ್ದಾರೆ.

ಝೋಹ್ರಾನ್ ಮಮ್ದಾನಿ ಮೇಯರ್ ಚುನಾವಣೆಯಲ್ಲಿ ಆಯ್ಕೆಯಾದರೆ, ಅವರು ದೇಶದ ಅತಿದೊಡ್ಡ ನಗರವನ್ನು ಮುನ್ನಡೆಸುವ ಮೊದಲ ಮುಸ್ಲಿಂ ಮತ್ತು ಭಾರತೀಯ ಅಮೆರಿಕನ್ ಆಗಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News