×
Ad

ಹವಾಯಿ ಕಾಳ್ಗಿಚ್ಚಿಗೆ ಬಲಿಯಾದವರ ಸಂಖ್ಯೆ 53ಕ್ಕೆ ಏರಿಕೆ

Update: 2023-08-11 09:52 IST

ಕಹುಲ್ಯೂ: ಹವಾಯಿ ದ್ವೀಪದ ಐತಿಹಾಸಿಕ ಪಟ್ಟಣವನ್ನು ಅಕ್ಷರಶಃ ಭಸ್ಮಗೊಳಿಸಿರುವ ಭೀಕರ ಕಾಳ್ಗಿಚ್ಚಿಗೆ ಬಲಿಯಾದವರ ಸಂಖ್ಯೆ ಗುರುವಾರ 53ಕ್ಕೇರಿದೆ. ಅಮೆರಿಕದ ರಾಜ್ಯವಾದ ಬಳಿಕ ಈ ಪುಟ್ಟ ದ್ವೀಪರಾಜ್ಯದ ಇತಿಹಾಸದಲ್ಲೇ ಸಂಭವಿಸಿದ ಅತಿದೊಡ್ಡ ಕಾಳ್ಗಿಚ್ಚು ದುರಂತ ಇದಾಗಿದೆ.

ಹವಾಯಿಯ ಮೌವ್ವಿ ದ್ವೀಪದ ಪಶ್ಚಿಮ ಕರಾವಳಿಯಲ್ಲಿ ಆರಂಭವಾದ ಕಾಳ್ಗಿಚ್ಚು, ಪಕ್ಕದಲ್ಲಿ ಹಾದುಹೋಗುತ್ತಿದ್ದ ಬಿರುಗಾಳಿಯಿಂದಾಗಿ ಕಡಲ ಕಿನಾರೆಯ ಲಹೈನಾ ನಗರವನ್ನು ವ್ಯಾಪಿಸಿತು. ಬೆಂಕಿಯ ಜ್ವಾಲೆ ಎಷ್ಟು ಶೀಘ್ರವಾಗಿ ವ್ಯಾಪಿಸಿತು ಎಂದರೆ ಹಲವು ಮಂದಿ ಯಾವುದೇ ರಕ್ಷಣೆ ಪಡೆಯಲು ಸಾಧ್ಯವಾಗದೇ ಬೀದಿಯಲ್ಲಿ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡರ ಅಥವಾ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಮುದ್ರಕ್ಕೆ ಹಾರಿದರು ಎಂದು ಉನ್ನತ ಮೂಲಗಳು ಹೇಳಿವೆ.

"1960ರಲ್ಲಿ ದೊಡ್ಡ ದ್ವೀಪಕ್ಕೆ ಬೃಹತ್ ಅಲೆ ಅಪ್ಪಳಿಸಿ 61 ಮಂದಿ ಮೃತಪಟ್ಟಿದ್ದರು" ಎಂದು ಗವರ್ನರ್ ಜೋಶ್ ಗ್ರೀನ್ ಹೇಳಿದ್ದಾರೆ. ಹವಾಯಿ ದ್ವೀಪ ಅಮೆರಿಕದ 50ನೇ ರಾಜ್ಯವಾಗಿ ಸೇರ್ಪಡೆಯಾದ ಒಂದು ವರ್ಷದಲ್ಲೇ ಈ ದುರಂತ ಸಂಭವಿಸಿತ್ತು ಎಂದು ನೆನಪಿಸಿಕೊಂಡಿದ್ದಾರೆ. "ಈ ಬಾರಿ ಸಾವಿನ ಸಂಖ್ಯೆ ಅದನ್ನು ಮೀರುವ ಎಲ್ಲ ಸಾಧ್ಯತೆಯೂ ಇದೆ" ಎಂದು ಹೇಳಿದ್ದಾರೆ.

ಗುರುವಾರ 53 ಮಂದಿ ಬೆಂಕಿದುರಂತದಲ್ಲಿ ಮೃತಪಟ್ಟಿರುವುದನ್ನು ಮೌವ್ವಿ ಕೌಂಟಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಲಹೈನಾ ಪಟ್ಟಣ ಗುರುವಾರ ಸಂಪೂರ್ಣ ಸುಟ್ಟು ಕರಕಲಾಗಿರುವ ದೃಶ್ಯ ಕಾಣಿಸುತ್ತಿದ್ದು, ಹೊಗೆಯಾಡುತ್ತಿರುವ ಅವಶೇಷಗಳು ಎಲ್ಲೆಂದರಲ್ಲಿ ಕಾಣಿಸುತ್ತಿವೆ. ಪಟ್ಟಣದ ಶೇಕಡ 80ರಷ್ಟು ಭಾಗ ನಾಶವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಲಹೈನಾ ಪಟ್ಟಣಕ್ಕೆ ಬಾಂಬ್ ಬಿದ್ದಂತೆ ಕಾಣಿಸುತ್ತಿದೆ ಎಂದು ವಿವರಿಸುವುದು ನಿಸ್ಸಂಶಯ ಎಂದು ಅವರು ಹೇಳಿದ್ದಾರೆ. "ಇದು ಸಂಪೂರ್ಣ ವಿನಾಶ. ನಾವು ದಶಕಗಳಿಂದ ಸಂತೋಷದಿಂದ ಕಳೆದ, ಸಂಭ್ರಮಿಸಿದ, ತಲೆಮಾರುಗಳನ್ನು ಕಳೆದ ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ" ಎಂದು ಅವರು ಬಣ್ಣಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News