ಯುದ್ಧ ಅಂತ್ಯಗೊಳ್ಳದಿದ್ದರೆ ಉಕ್ರೇನ್ ನಲ್ಲಿ ಟೊಮಾಹಾಕ್ ಕ್ಷಿಪಣಿ ನಿಯೋಜನೆ: ರಶ್ಯಕ್ಕೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಡೊನಾಲ್ಡ್ ಟ್ರಂಪ್ |Photo Credit : PTI
ವಾಷಿಂಗ್ಟನ್, ಅ.13: ಉಕ್ರೇನ್ ನಲ್ಲಿನ ಯುದ್ಧವನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸದಿದ್ದರೆ ತಾನು ಉಕ್ರೇನ್ ಗೆ ದೀರ್ಘ ಶ್ರೇಣಿಯ ಟೊಮಾಹಾಕ್ ಕ್ಷಿಪಣಿಯನ್ನು ರವಾನಿಸಬಹುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಶ್ಯಕ್ಕೆ ಎಚ್ಚರಿಕೆ ನೀಡಿದ್ದಾರೆ.
`ನೋಡಿ. ಈ ಯುದ್ಧ ಇತ್ಯರ್ಥಗೊಳ್ಳದಿದ್ದರೆ ನಾನು ಉಕ್ರೇನ್ ಗೆ ಟೊಮಾಹಾಕ್ ಕ್ಷಿಪಣಿಗಳನ್ನು ಕಳುಹಿಸುತ್ತೇನೆ. ಟಾಮ್‍ಹಾಕ್ ಅದ್ಭುತ ಆಯುಧವಾಗಿದ್ದು ರಶ್ಯಕ್ಕೆ ಖಂಡಿತಾ ಇದನ್ನು(ಟೊಮಾಹಾಕ್ ನಿಯೋಜನೆಯನ್ನು) ಬಯಸುವುದಿಲ್ಲ' ಎಂದು ಮಾಧ್ಯಮದವರ ಜೊತೆ ಮಾತನಾಡುತ್ತಿದ್ದ ಟ್ರಂಪ್ ಹೇಳಿದ್ದಾರೆ.
ಟೊಮಾಹಾಕ್ ಕ್ಷಿಪಣಿಗೆ ಉಕ್ರೇನ್ ಕೋರಿಕೆ ಮುಂದಿಟ್ಟಿರುವ ಬಗ್ಗೆ ರಶ್ಯದೊಂದಿಗೆ ಮಾತನಾಡುವುದಾಗಿ ಟ್ರಂಪ್ ಹೇಳಿದ್ದಾರೆ.
2,500 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಟಾಮ್‍ಹಾಕ್ ಕ್ಷಿಪಣಿಯ ಮೂಲಕ ಉಕ್ರೇನ್ ಸುಲಭವಾಗಿ ರಶ್ಯ ರಾಜಧಾನಿ ಮಾಸ್ಕೋದ ಮೇಲೆಯೂ ದಾಳಿ ನಡೆಸಬಹುದಾಗಿದೆ. ಟೊಮಹಾಕ್ಸ್ ವಿಷಯವು ರಶ್ಯಕ್ಕೆ ಅತ್ಯಂತ ಕಳವಳದ ವಿಷಯವಾಗಿದೆ. ಉದ್ವಿಗ್ನತೆಗಳು ಎಲ್ಲಾ ಕಡೆಯಿಂದಲೂ ಉಲ್ಬಣಗೊಳ್ಳುತ್ತಿವೆ' ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ರವಿವಾರ ಹೇಳಿದ್ದರು.
ಟ್ರಂಪ್ ಎಚ್ಚರಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಯದ ಮಾಜಿ ಅಧ್ಯಕ್ಷ, ರಾಷ್ಟ್ರೀಯ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ` ಉಕ್ರೇನ್ ಗೆ ಟಾಮ್‍ಹಾಕ್ ಪೂರೈಸಿದರೆ ಎಲ್ಲರಿಗೂ, ವಿಶೇಷವಾಗಿ ಟ್ರಂಪ್‍ಗೆ ಸಮಸ್ಯೆಯಾಗಬಹುದು. ಪರಮಾಣು ಸಬ್‍ಮೆರೀನ್ ಗಳನ್ನು ರಶ್ಯದ ಸನಿಹಕ್ಕೆ ಕಳುಹಿಸುವ ಹಾಗೆ ಇದು ಮತ್ತೊಂದು ಪೊಳ್ಳು ಬೆದರಿಕೆಯೆಂದು ಆಶಿಸುತ್ತೇವೆ' ಎಂದಿದ್ದಾರೆ.