3ನೇ ಅವಧಿಗೆ ಅಮೆರಿಕದ ಅಧ್ಯಕ್ಷನಾಗಲು ಉತ್ಸುಕನಾಗಿದ್ದೇನೆ : ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಶಿಂಗ್ಟನ್, ಅ. 28: 2028ರ ಚುನಾವಣೆಯಲ್ಲಿ ತಾನು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಆದರೆ, ಮೂರನೇ ಬಾರಿಗೆ ಅಧ್ಯಕ್ಷನಾಗಲು ಇಷ್ಟಪಡುತ್ತೇನೆ ಎಂದಿದ್ದಾರೆ.
ಮೂರನೇ ಬಾರಿಗೆ ಅಧ್ಯಕ್ಷನಾಗಲು ಅಮೆರಿಕದ ಸಂವಿಧಾನದಲ್ಲಿ ಅವಕಾಶವಿಲ್ಲವಾದರೂ, ಟ್ರಂಪ್ ಸೋಮವಾರ ತನ್ನ ಮನದಿಚ್ಛೆಯನ್ನು ಬಿಚ್ಚಿಟ್ಟಿದ್ದಾರೆ. ಟ್ರಂಪ್ ಮೊದಲು 2017ರಿಂದ 2021ರವರೆಗೆ ಅಮೆರಿಕದ ಅಧ್ಯಕ್ಷನಾಗಿದ್ದರು. ಬಳಿಕ ಈ ವರ್ಷದ ಜನವರಿಯಲ್ಲಿ ಎರಡನೇ ಬಾರಿಗೆ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
79 ವರ್ಷದ ಟ್ರಂಪ್, ಸಂವಿಧಾನ ಅನುಮೋದಿತ ಎರಡು ಅವಧಿಗಳಿಗಿಂತಲೂ ಹೆಚ್ಚು ಬಾರಿ ಅಧ್ಯಕ್ಷನಾಗುವ ಆಶೆಯನ್ನು ಪದೇ ಪದೇ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಲವು ಸಭೆಗಳಲ್ಲಿ ಅವರು ಮಾತನಾಡಿದ್ದಾರೆ ಮತ್ತು ‘ಟ್ರಂಪ್ 2028’ ಹ್ಯಾಟ್‌ಗಳನ್ನು ಧರಿಸಿ ಬೆಂಬಲಿಗರನ್ನು ಉತ್ತೇಜಿಸಿದ್ದಾರೆ.
ಅವರ ಕೆಲವು ಸ್ನೇಹಿತರು ಈ ಸಂಕೇತಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಟ್ರಂಪ್‌ರನ್ನು ಮೂರನೇ ಬಾರಿ ಅಧ್ಯಕ್ಷರಾಗಿ ಮಾಡಲು ಕಾನೂನು ಮತ್ತು ರಾಜಕೀಯ ದಾರಿಗಳನ್ನು ಶೋಧಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಇದಕ್ಕೂ ಒಂದು ದಾರಿಯನ್ನು ಕೆಲವರು ಕಂಡುಕೊಂಡಿದ್ದಾರೆ. ಟ್ರಂಪ್ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಬೇಕು ಮತ್ತು ಇನ್ನೊಬ್ಬ ವ್ಯಕ್ತಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಬೇಕು. ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ರಾಜೀನಾಮೆ ನೀಡಬೇಕು. ಆಗ ಉಪಾಧ್ಯಕ್ಷ ಟ್ರಂಪ್ ಅಧ್ಯಕ್ಷರಾಗುತ್ತಾರೆ.
ಆದರೆ, ತಾನು ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ಟ್ರಂಪ್ ಸೋಮವಾರ ಹೇಳಿದ್ದಾರೆ. ‘‘ನಾನು ಹಾಗೆ ಮಾಡುವುದಿಲ್ಲ. ಅದು ಚಂದದ ದಾರಿ. ಆದರೆ, ನಾನು ಹಾಗೆ ಮಾಡುವುದಿಲ್ಲ, ಯಾಕೆಂದರೆ ಅದು ತುಂಬಾ ಚಂದದ ದಾರಿಯಾಗಿದೆ. ಜನರು ಅದನ್ನು ಇಷ್ಟಪಡುವುದಿಲ್ಲ ಎಂದು ನನಗನಿಸುತ್ತದೆ. ಅದು ಸರಿಯಲ್ಲ’’ ಎಂದು ಅವರು ಹೇಳಿದರು.