ಉಕ್ರೇನ್ ಮೇಲೆ ರಶ್ಯದಿಂದ ಡ್ರೋನ್, ಕ್ಷಿಪಣಿ ದಾಳಿ ; ಕನಿಷ್ಠ 14 ಸಾವು
ಕೀವ್: ಉಕ್ರೇನ್ ನ ಪೂರ್ವದಲ್ಲಿರುವ ಡೊಬ್ರೊಪಿಲ್ಲಿಯ ನಗರದ ಮೇಲೆ ಶುಕ್ರವಾರ ರಾತ್ರಿಯಿಂದ ರಶ್ಯ ನಡೆಸಿದ ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಐವರು ಮಕ್ಕಳ ಸಹಿತ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು ಇತರ 37 ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ನ ಆಂತರಿಕ ಸಚಿವಾಲಯ ಶನಿವಾರ ಹೇಳಿದೆ.
ಡೊಬ್ರೊಪಿಲಿಯಾದ ಮೇಲೆ ಬ್ಲಾಲಿಸ್ಟಿಕ್ ಕ್ಷಿಪಣಿಗಳು, ರಾಕೆಟ್‍ಗಳು ಮತ್ತು ಡ್ರೋನ್‍ಗಳ ಮೂಲಕ ರಶ್ಯನ್ ಪಡೆಗಳು ದಾಳಿ ನಡೆಸಿದ್ದು 8 ಬಹುಮಹಡಿ ಕಟ್ಟಡಗಳು ಮತ್ತು 30 ವಾಹನಗಳಿಗೆ ಹಾನಿಯಾಗಿದೆ. ಐವರು ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದು 37 ಮಂದಿ ಗಾಯಗೊಂಡಿದ್ದಾರೆ. ಜನವಸತಿ ಕಟ್ಟಡಗಳಿಗೆ ಹರಡಿದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದ್ದಾಗ ಶತ್ರುಗಳು ಮತ್ತೆ ದಾಳಿ ನಡೆಸಿ ಅಗ್ನಿಶಾಮಕ ವಾಹನವನ್ನು ಜಖಂಗೊಳಿಸಿದ್ದಾರೆ' ಎಂದು ಸಚಿವಾಲಯದ ಹೇಳಿಕೆ ತಿಳಿಸಿದ್ದು ಕ್ಷಿಪಣಿ ದಾಳಿ ನಡೆದ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಮತ್ತು ಧ್ವಂಸಗೊಂಡ ಕಟ್ಟಡಗಳ ವೀಡಿಯೊವನ್ನು ಪ್ರಸಾರ ಮಾಡಿದೆ.
ಎರಡು ಇಸ್ಕಾಂಡರ್-ಎಂ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಒಂದು ಇಸ್ಕಾಂಡರ್-ಕೆ ಕ್ರೂಸ್ ಕ್ಷಿಪಣಿ ಹಾಗೂ 145 ಡ್ರೋನ್‍ಗಳನ್ನು ರಶ್ಯ ಪ್ರಯೋಗಿಸಿದ್ದು ಇದರಲ್ಲಿ ಒಂದು ಕ್ರೂಸ್ ಕ್ಷಿಪಣಿ ಮತ್ತು 79 ಡ್ರೋನ್‍ಗಳನ್ನು ವಾಯುಪಡೆ ಹೊಡೆದುರುಳಿಸಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿದೆ.
ಈಶಾನ್ಯದ ಖಾರ್ಕಿವ್ ಪ್ರದೇಶದ ಮೇಲೆ ನಡೆದ ಪ್ರತ್ಯೇಕ ಡ್ರೋನ್ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ರಶ್ಯದ ಉದ್ದೇಶಗಳು ಬದಲಾಗಿಲ್ಲ ಎಂಬುದಕ್ಕೆ ಇಂತಹ ದಾಳಿಗಳು ನಿದರ್ಶನವಾಗಿದೆ. ಆದ್ದರಿಂದ ಜೀವಗಳನ್ನು ರಕ್ಷಿಸಲು, ನಮ್ಮ ವಾಯು ರಕ್ಷಣೆಯನ್ನು ಬಲಪಡಿಸಲು ಮತ್ತು ರಶ್ಯ ವಿರುದ್ಧ ನಿರ್ಬಂಧಗಳನ್ನು ಹೆಚ್ಚಿಸಲು ನಮ್ಮಿಂದ ಸಾಧ್ಯವಿರುವಷ್ಟು ಪ್ರಯತ್ನ ಮುಂದುವರಿಸುವುದು ಬಹಳ ಮುಖ್ಯವಾಗಿದೆ. ಪುಟಿನ್‍ಗೆ ಯುದ್ಧಕ್ಕೆ ನೆರವಾಗುವ ಎಲ್ಲಾ ಆರ್ಥಿಕ ನೆರವಿನ ಮೂಲಗಳನ್ನೂ ಕತ್ತರಿಸಬೇಕಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಉಕ್ರೇನ್‍ಗೆ ಯುದ್ಧಕ್ಕೆ ಸಂಬಂಧಿಸಿದ ಗುಪ್ತಚರ ಮಾಹಿತಿ ಹಂಚಿಕೆಯನ್ನು ಅಮೆರಿಕ ಸ್ಥಗಿತಗೊಳಿಸಿದ ಬಳಿಕ ಶುಕ್ರವಾರ ರಶ್ಯದ ಪಡೆಗಳ ದಾಳಿಯಲ್ಲಿ ಉಕ್ರೇನ್ ನ ಇಂಧನ ಮತ್ತು ಅನಿಲ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ. ಅಮೆರಿಕದ ಮಿಲಿಟರಿ ನೆರವು ಮತ್ತು ಗುಪ್ತಚರ ಮಾಹಿತಿ ಹಂಚಿಕೆ ಸ್ಥಗಿತವು ಉಕ್ರೇನ್ ನ ವಾಯುರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಲಿದೆ. ಪೂರ್ವ ಉಕ್ರೇನ್ ನ ಡೊನೆಟ್ಸ್ಕ್ ಪ್ರಾಂತದಲ್ಲಿರುವ ಡೊಬ್ರೊಪಿಲ್ಲಿಯ ನಗರವು ಅತ್ಯಂತ ಆಯಕಟ್ಟಿನ ಪ್ರದೇಶ ಪೊಕ್ರೋವ್ಸ್ಕ್‍ನಿಂದ ಸುಮಾರು 22 ಕಿ.ಮೀ ದೂರದಲ್ಲಿದ್ದು ಇದನ್ನು ವಶಪಡಿಸಿಕೊಳ್ಳುವುದು ರಶ್ಯದ ಯೋಜನೆಯಾಗಿದೆ ಎಂದು ಮಿಲಿಟರಿ ವಿಶ್ಲೇಷಕರು ಹೇಳಿದ್ದಾರೆ.