ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 600ಕ್ಕೂ ಅಧಿಕ ಮಂದಿ ಮೃತ್ಯು, 400 ಮಂದಿಗೆ ಗಾಯ
ಮುಂದುವರಿದ ರಕ್ಷಣಾ ಕಾರ್ಯಾಚರಣೆ
Photo credit:X/@nabilajamal_
ಕಾಬೂಲ್: ಪೂರ್ವ ಅಫ್ಘಾನಿಸ್ತಾನದಲ್ಲಿ ರಾತ್ರೋರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 622 ಮಂದಿ ಮೃತಪಟ್ಟು, ಕನಿಷ್ಠ 400 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರಕಾರದ ಆಂತರಿಕ ಸಚಿವಾಲಯದ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ಹೊಂದಿದ್ದ ಈ ಭೂಕಂಪವು ಸ್ಥಳೀಯ ಕಾಲಮಾನ ರಾತ್ರಿ 11.47ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ಹೇಳಿದೆ. ಭೂಕಂಪದಿಂದ ತೀವ್ರ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಭೂಕಂಪನ ಕೇಂದ್ರವು ಪೂರ್ವ ಅಫ್ಘಾನಿಸ್ತಾನದ 160 ಕಿಮೀ ಆಳದಲ್ಲಿತ್ತು. ಪಾಕಿಸ್ತಾನ ಹಾಗೂ ಉತ್ತರ ಭಾರತ ಸೇರಿದಂತೆ ಈ ಪ್ರಾಂತ್ಯದ ಬಹುತೇಕ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ದಿಲ್ಲಿ-ಎನ್ಸಿಆರ್ ಹಾಗೂ ಇನ್ನಿತರ ನಗರಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ.
ಭೂಕಂಪನದ ನಂತರ ಸರಣಿ ಕಂಪನಗಳೂ ಸಂಭವಿಸಿದ್ದು, ಅವುಗಳ ತೀವ್ರತೆ 4.7, 4.3, 5.0 ಹಾಗೂ 5.0ಯಷ್ಟಿತ್ತು ಎಂದು ಹೇಳಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಮತ್ತಷ್ಟು ಹಾನಿ ಸಂಭವಿಸುವ ಭೀತಿ ಎದುರಾಗಿದೆ.