ಮುಂದಿನ 5-10 ವರ್ಷಗಳಲ್ಲಿ ಮಹಾ ಯುದ್ಧ ನಡೆಯಲಿದೆ: ಎಲಾನ್ ಮಸ್ಕ್ ಎಚ್ಚರಿಕೆ
ಎಲಾನ್ ಮಸ್ಕ್ | Photo Credit : PTI
ಹೊಸದಿಲ್ಲಿ,ಡಿ.2: ಜಗತ್ತು ಶೀಘ್ರವೇ ಜಾಗತಿಕ ಸಂಘರ್ಷದಲ್ಲಿ ಸಿಲುಕಲಿದೆ ಎಂದು ಟೆಕ್ ಬಿಲಿಯಾಧೀಶ ಎಲಾನ್ ಮಸ್ಕ್ ಸಾರ್ವಜನಿಕವಾಗಿ ಭವಿಷ್ಯ ನುಡಿದಿದ್ದಾರೆ.
ಜಾಗತಿಕ ಆಡಳಿತದ ಮೇಲೆ ಪರಮಾಣು ತಡೆಗಟ್ಟುವಿಕೆಯ ಪರಿಣಾಮವನ್ನು ಎಕ್ಸ್ ನಲ್ಲಿ ಚರ್ಚಿಸಿದ ಬಳಕೆದಾರರೊಬ್ಬರಿಗೆ ಮಸ್ಕ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಹಂಟರ್ ಆ್ಯಷ್ ಎಂಬ ಎಕ್ಸ್ ಬಳಕೆದಾರರು, ಯುದ್ಧದ ಯಾವುದೇ ಬಾಹ್ಯ ಬೆದರಿಕೆಯಿಲ್ಲದೆ ವಿಶ್ವಾದ್ಯಂತ ಸರಕಾರಗಳು ನಿರುಮ್ಮಳವಾಗಿದ್ದು,ಆಡಳಿತದಲ್ಲಿ ಕಡಿಮೆ ಪರಿಣಾಮಕಾರಿಯಾಗಿವೆ ಎಂದು ಪ್ರತಿಪಾದಿಸಿದ್ದರು.
► ಯುದ್ಧ ಅನಿವಾರ್ಯ
ಅಣ್ವಸ್ತ್ರಗಳು ಬಲಿಷ್ಠ ದೇಶಗಳ ನಡುವೆ ಯುದ್ಧವನ್ನು ಅಥವಾ ಯುದ್ಧದ ಬೆದರಿಕೆಯನ್ನೂ ತಡೆಯುತ್ತಿರುವುದರಿಂದ ಸರಕಾರಗಳು ಆಡಳಿತದಲ್ಲಿ ಜಡವಾಗಿವೆ. ಹೀಗಾಗಿ ಅವು ಗಂಭೀರವಾಗಿರಲು ಯಾವುದೇ ಬಾಹ್ಯ/ವಿಕಸನಶೀಲ/ಮಾರುಕಟ್ಟೆ ಒತ್ತಡಗಳು ಇಲ್ಲ ಎಂದು ಅವರು ಬರೆದಿದ್ದರು.
ಇದಕ್ಕೆ ಸ್ಪಷ್ಟವಾಗಿ ಉತ್ತರಿಸಿರುವ ಮಸ್ಕ್,ಯುದ್ಧ ನಡೆಯುವುದು ಖಚಿತ. ಯಾವಾಗ ಎಂದು ನೀವು ಕೇಳಬಹುದು. ನನ್ನ ಪ್ರಕಾರ 2030ರೊಳಗೆ. ಯುದ್ಧ ಅನಿವಾರ್ಯ, ಐದು ವರ್ಷಗಳಲ್ಲಿ, ಹೆಚ್ಚೆಂದರೆ 10 ವರ್ಷಗಳಲ್ಲಿ ಅದು ನಡೆಯಲಿದೆ ಎಂದು ಹೇಳಿದ್ದಾರೆ.
ಆದರೆ ಮಸ್ಕ್ ತನ್ನ ಹೇಳಿಕೆಯ ಬಗ್ಗೆ ನಿರ್ದಿಷ್ಟವಾಗಿ ಅಥವಾ ವಿವರವಾಗಿ ಏನನ್ನೂ ಹೇಳಿಲ್ಲ, ತನ್ಮೂಲಕ ಶೀಘ್ರದಲ್ಲಿಯೇ ಏನು ಸಂಭವಿಸಲಿದೆ ಎಂಬ ಬಗ್ಗೆ ಎಕ್ಸ್ ಬಳಕೆದಾರರನ್ನು ಕತ್ತಲೆಯಲ್ಲಿ ಇರಿಸಿದ್ದಾರೆ.
ಬಹುಶ ಸರಕಾರಗಳು ಶೀಘ್ರದಲ್ಲೇ ಎದುರಾಗಬಹುದಾದ ಭವಿಷ್ಯದ ಸಂಕಷ್ಟಕ್ಕೆ ಸಜ್ಜಾಗಲು ತಮ್ಮ ಪ್ರಯತ್ನಗಳನ್ನು ಹೆಚ್ಚಿಸುವುದು ಅಗತ್ಯವಾಗಬಹುದು ಎಂದು ಸೂಚಿಸಲು ಮಸ್ಕ್ ಈ ರೀತಿಯಲ್ಲಿ ಸೂಚಿಸಿರಬಹುದು. ಆದರೆ ಗಣ್ಯವ್ಯಕ್ತಿಯಾಗಿ ಮಸ್ಕ್ ಅವರ ಪ್ರಭಾವ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಡಿ ಸರಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರಾಗಿ ಅವರ ಅನುಭವವನ್ನು ಪರಿಗಣಿಸಿ ಅವರ ಈ ಹೇಳಿಕೆ ಎಲ್ಲರ ಗಮನವನ್ನು ಸೆಳೆದಿದೆ.