"ಎಲ್ಲರೂ ತಕ್ಷಣವೇ ಟೆಹ್ರಾನ್ ನಿಂದ ಸ್ಥಳಾಂತರವಾಗಬೇಕು": ಡೊನಾಲ್ಡ್ ಟ್ರಂಪ್ ಎಚ್ಚರಿಕೆ
PC: PTI
ವಾಷಿಂಗ್ಟನ್: ಇರಾನಿನ ಜನತೆ ಎಲ್ಲರೂ ತಕ್ಷಣವೇ ಟೆಹರಾನ್ ನಿಂದ ಸ್ಥಳಾಂತರವಾಗಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಮಧ್ಯ ಪ್ರಾಚ್ಯದಲ್ಲಿನ ಉದ್ವಿಗ್ನ ಸ್ಥಿತಿಯಿಂದ ಟ್ರಂಪ್ ಅವರು ಕೆನಡಾದಲ್ಲಿ ನಡೆದ ಗ್ರೂಪ್ ಆಫ್ ಸೆವೆನ್ G-7 ಸಮ್ಮಿಟ್ ನಿಂದ ಒಂದು ದಿನ ಮುಂಚಿತವಾಗಿ ತೆರಳಬೇಕಾಯಿತು ಎಂದು ಶ್ವೇತ ಭವನ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆಯು ಇರಾನ್ ಮೇಲೆ ಮತ್ತಷ್ಟು ತೀವ್ರ ಸಂಭಾವ್ಯ ದಾಳಿಯ ಮುನ್ಸೂಚನೆಯನ್ನು ನೀಡಿದೆ.
ಇಸ್ರೇಲ್ ಮತ್ತು ಇರಾನ್ ಮಂಗಳವಾರ ಐದನೇ ದಿನವೂ ಪರಸ್ಪರ ದಾಳಿ ನಡೆಸಿವೆ. ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ತಡೆಯುವ ಒಪ್ಪಂದವನ್ನು ಇರಾನ್ ತಿರಸ್ಕರಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.
ಮಧ್ಯಪ್ರಾಚ್ಯ ಪರಿಸ್ಥಿತಿಯಿಂದಾಗಿ ಟ್ರಂಪ್ ಸೋಮವಾರ ನಂತರ ಕೆನಡಾದಲ್ಲಿ ನಡೆದ ಗ್ರೂಪ್ ಆಫ್ ಸೆವೆನ್ ಶೃಂಗಸಭೆಯಿಂದ ಒಂದು ದಿನ ಮುಂಚಿತವಾಗಿ ಹೊರಡಬೇಕಿತ್ತು ಎಂದು ಶ್ವೇತಭವನ ತಿಳಿಸಿದೆ.
ಟ್ರಂಪ್ ಅವರು ತಮ್ಮ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆ ಕರೆಯಲಿದ್ದಾರೆ ಎಂದು fox news ವರದಿ ಮಾಡಿದೆ. ಇಸ್ರೇಲ್ ಮತ್ತು ಇರಾನ್ ಅನ್ನು ಕದನ ವಿರಾಮಕ್ಕೆ ಒಪ್ಪಿಸುವುದು ತಕ್ಷಣದ ಉದ್ದೇಶವಾಗಿರುವುದರಿಂದ G-7 ಶೃಂಗಸಭೆಯಿಂದ ಟ್ರಂಪ್ ಅವರ ನಿರ್ಗಮನವು ಸಕಾರಾತ್ಮಕವಾಗಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.
"ನಾನು ಸಹಿ ಮಾಡಲು ಹೇಳಿದ 'ಒಪ್ಪಂದ'ಕ್ಕೆ ಇರಾನ್ ಸಹಿ ಹಾಕಬೇಕಿತ್ತು. ಈಗ ಎಷ್ಟೋ ಜನರು ಜೀವ ಕಳೆದುಕೊಂಡಿದ್ದಾರೆ. ಎಂತಹ ನಾಚಿಕೆಗೇಡಿನ ಸಂಗತಿ. ಸರಳವಾಗಿ ಹೇಳುವುದಾದರೆ, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ. ನಾನು ಅದನ್ನು ಪದೇ ಪದೇ ಹೇಳಿದ್ದೇನೆ! ಎಲ್ಲರೂ ತಕ್ಷಣ ಟೆಹ್ರಾನ್ ನಿಂದ ಸ್ಥಳಾಂತರವಾಗಬೇಕು!" ಎಂದು ಟ್ರಂಪ್ ತಮ್ಮ ಟ್ರುತ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
ಮಂಗಳವಾರ ಮುಂಜಾನೆ ಟೆಹ್ರಾನ್‌ನಲ್ಲಿ ಸ್ಫೋಟಗಳು ಕೇಳಿಸಿವೆ. ಭಾರೀ ಪ್ರಮಾಣದಲ್ಲಿ ವಾಯು ರಕ್ಷಣಾ ಗುಂಡಿನ ದಾಳಿ ನಡೆದಿವೆ ಎಂದು ಇರಾನಿನ ಮಾಧ್ಯಮ ವರದಿ ಮಾಡಿದೆ. ಟೆಹ್ರಾನ್ ನಿಂದ 320 ಕಿಮೀ ದೂರದಲ್ಲಿರುವ ಪ್ರಮುಖ ಪರಮಾಣು ಸ್ಥಾಪನೆಗಳ ನೆಲೆಯಾದ ನಟಾಂಜ್‌ನಲ್ಲಿಯೂ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಅಸ್ರಿರಾನ್ ಸುದ್ದಿ ವೆಬ್‌ಸೈಟ್ ವರದಿ ಮಾಡಿದೆ.
ಇಸ್ರೇಲ್‌ನಲ್ಲಿ, ಇರಾನಿನ ಕ್ಷಿಪಣಿಗಳು ಮತ್ತೆ ದೇಶವನ್ನು ಗುರಿಯಾಗಿಸಿಕೊಂಡಾಗ ಮಧ್ಯರಾತ್ರಿ ಟೆಲ್ ಅವೀವ್‌ನಲ್ಲಿ ವಾಯುದಾಳಿ ಸೈರನ್‌ಗಳು ಮೊಳಗಿದವು ಮತ್ತು ಸ್ಫೋಟಗಳ ಶಬ್ದವು ಕೇಳಿಸಿತು ಎಂದು ತಿಳಿದು ಬಂದಿದೆ.