×
Ad

ಖ್ಯಾತ ಫ್ಯಾಷನ್ ಡಿಸೈನರ್ ಜಾರ್ಜಿಯೊ ಅರ್ಮಾನಿ ನಿಧನ

Update: 2025-09-04 20:57 IST

ಜಾರ್ಜಿಯೊ ಅರ್ಮಾನಿ | PC : newindianexpress.com

ಮಿಲನ್: ಜಗತ್ತಿನ ಫ್ಯಾಷನ್ ಲೋಕಕ್ಕೆ ಹೊಸ ಅರ್ಥ ನೀಡಿದ ಇಟಲಿಯ ಖ್ಯಾತ ಫ್ಯಾಷನ್ ಡಿಸೈನರ್ ಜಾರ್ಜಿಯೊ ಅರ್ಮಾನಿ ಅವರು 91ನೇ ವಯಸ್ಸಿನಲ್ಲಿ ನಿಧನರಾದರು. ಅರ್ಮಾನಿ ಫ್ಯಾಷನ್ ಹೌಸ್ ಅಧಿಕೃತವಾಗಿ ಈ ಸುದ್ದಿ ದೃಢಪಡಿಸಿದೆ.

ಜೂನ್ 2025ರಲ್ಲಿ ಅನಾರೋಗ್ಯದ ಕಾರಣ ಅರ್ಮಾನಿ ಅವರು ಮಿಲನ್ ಫ್ಯಾಷನ್ ವೀಕ್‌ ನಿಂದ ಮೊದಲ ಬಾರಿಗೆ ಹೊರಗೆ ಉಳಿದಿದ್ದರು.ಈ ತಿಂಗಳ ಮಿಲನ್ ಫ್ಯಾಷನ್ ವೀಕ್ ಸಂದರ್ಭದಲ್ಲಿ ತಮ್ಮ ಜಾರ್ಜಿಯೊ ಅರ್ಮಾನಿ ಫ್ಯಾಷನ್ ಹೌಸ್‌ನ 50 ವರ್ಷಗಳ ಸಂಭ್ರಮಾಚರಣೆ ನಡೆಸಲು ಅವರು ಯೋಜಿಸಿದ್ದರು.

ಫ್ಯಾಷನ್ ಲೋಕಕ್ಕೆ ಅರ್ಮಾನಿಯ ಕೊಡುಗೆ

1970ರ ದಶಕದ ಉತ್ತರಾರ್ಧದಲ್ಲಿ, ರೇಖೆಗಳಿಲ್ಲದ ಜಾಕೆಟ್, ಸರಳ ಪ್ಯಾಂಟ್‌ಗಳು, ಮತ್ತು ಮೃದು ಪ್ಯಾಲೆಟ್‌ಗಳೊಂದಿಗೆ ಅವರು ಇಟಾಲಿಯನ್ ರೆಡಿ-ಟು-ವೇರ್ ಫ್ಯಾಷನ್‌ ಗೆ ಹೊಸ ರೂಪ ನೀಡಿದರು. ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ಅವರು ತಮ್ಮ ಫ್ಯಾಷನ್ ಹೌಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದರು.

ಹಾಲಿವುಡ್‌ನಿಂದ ವಾಲ್‌ಸ್ಟ್ರೀಟ್‌ವರೆಗೆ, ಕ್ಲಾಸಿಕ್ ಟೈಲರ್ ಶೈಲಿ, ಸೂಪರ್-ಸಾಫ್ಟ್ ಬಟ್ಟೆಗಳು, ಮ್ಯೂಟ್ ಟೋನ್ಸ್, ಹಾಗೂ ಅದ್ಭುತ ಈವಿನಿಂಗ್ ಗೌನ್ಸ್‌ಗಳೊಂದಿಗೆ ಅರ್ಮಾನಿ ಶ್ರೀಮಂತರ ಹಾಗೂ ಪ್ರಸಿದ್ಧರ ನೆಚ್ಚಿನ ಡಿಸೈನರ್ ಆಗಿ ಹೊರಹೊಮ್ಮಿದರು.

10 ಬಿಲಿಯನ್ ಡಾಲರ್ ಸಾಮ್ರಾಜ್ಯದ ಶಿಲ್ಪಿ

ಅರ್ಮಾನಿ, ಉಡುಪುಗಳ ಜೊತೆಗೆ ಪರಿಕರಗಳು, ಗೃಹೋಪಯೋಗಿ ವಸ್ತುಗಳು, ಸುಗಂಧದ್ರವ್ಯಗಳು, ಸೌಂದರ್ಯವರ್ಧಕಗಳು, ಪುಸ್ತಕಗಳು, ಹೂವುಗಳು ಹಾಗೂ ಚಾಕೊಲೇಟ್‌ಗಳನ್ನು ಒಳಗೊಂಡಂತೆ, 10 ಬಿಲಿಯನ್ ಡಾಲರ್ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದರು. ಫೋರ್ಬ್ಸ್ ಪ್ರಕಾರ, ಅವರು ವಿಶ್ವದ ಅಗ್ರ 200 ಬಿಲಿಯನೇರ್‌ ಗಳಲ್ಲಿ ಸ್ಥಾನ ಪಡೆದಿದ್ದರು.

ರೆಸ್ಟೋರೆಂಟ್‌ಗಳು, ಬಾರ್‌ಗಳು, ಕ್ಲಬ್‌ಗಳು, ಹೋಟೆಲ್‌ಗಳು, ಹಾಗೂ ತಮ್ಮದೇ EA7 ಎಂಪೋರಿಯೊ ಅರ್ಮಾನಿ ಮಿಲನ್ ಬ್ಯಾಸ್ಕೆಟ್‌ಬಾಲ್ ತಂಡವನ್ನೂ ಅರ್ಮಾನಿ ಹೊಂದಿದ್ದರು. ದುಬೈ ಮತ್ತು ಮಿಲನ್‌ ನ ಐಷಾರಾಮಿ ಅರ್ಮಾನಿ ಹೋಟೆಲ್‌ಗಳು ಅವರ ಆಭಿರುಚಿಯ ಪ್ರತೀಕವಾಗಿದ್ದವು.

ಹಾಲಿವುಡ್‌ನ ನೆಚ್ಚಿನ ಡಿಸೈನರ್

1980ರ “ಅಮೆರಿಕನ್ ಗಿಗೊಲೊ” ಚಿತ್ರದಲ್ಲಿ ನಟ ರಿಚರ್ಡ್ ಗೇರ್ ಧರಿಸಿದ ಅರ್ಮಾನಿ ಉಡುಪು, ಡಿಸೈನರ್‌ ಗೆ ಹಾಲಿವುಡ್ ಬಾಗಿಲು ತೆರೆಯಿತು. ನಂತರ 200ಕ್ಕೂ ಹೆಚ್ಚು ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ ಅವರು, ಆಸ್ಕರ್‌ ರೆಡ್ ಕಾರ್ಪೆಟ್‌ ನಲ್ಲಿ ತಮ್ಮ ಸೃಜನಶೀಲತೆಯಿಂದ ಸದಾ ಮೆರೆದಿದ್ದರು.

ಅರ್ಮಾನಿಯ ಉಡುಪು ಧರಿಸಿದ ಸೆಲೆಬ್ರಿಟಿಗಳಲ್ಲಿ ಸೋಫಿಯಾ ಲೊರೆನ್, ಜಾರ್ಜ್ ಕ್ಲೂನಿ, ಆನ್ ಹ್ಯಾಥವೇ, ಜೋಡಿ ಫೋಸ್ಟರ್, ಬ್ರಾಡ್ ಪಿಟ್, ಹಾಗೂ ಡೇವಿಡ್-ವಿಕ್ಟೋರಿಯಾ ಬೆಕ್‌ಹ್ಯಾಮ್ ಪ್ರಮುಖರು.

ಮಾನವೀಯತೆಯ ಮತ್ತೊಂದು ಮುಖ ಅರ್ಮಾನಿ

ಫ್ಯಾಷನ್ ಸಾಮ್ರಾಜ್ಯ ನಿರ್ಮಿಸಿದರೂ, ಅರ್ಮಾನಿ ಮಾನವೀಯ ಮೌಲ್ಯಗಳನ್ನು ಮರೆಯಲಿಲ್ಲ. ಅವರು ಮಕ್ಕಳ ಕಲ್ಯಾಣ, ಏಡ್ಸ್ ವಿರೋಧಿ ಹೋರಾಟ, ಹಾಗೂ ನಿರಾಶ್ರಿತರ ಸಹಾಯ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2002ರಲ್ಲಿ ಅವರನ್ನು ಯುಎನ್ ಸದ್ಭಾವನಾ ರಾಯಭಾರಿಯಾಗಿ ನೇಮಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News