×
Ad

ಗಾಝಾ | ನೆರವು ವಿತರಣೆ ಸಂದರ್ಭದ ಸಾವು-ನೋವಿಗೆ ವಿಶ್ವಸಂಸ್ಥೆ ಖಂಡನೆ

Update: 2025-05-28 21:03 IST

PC : un.org

ವಿಶ್ವಸಂಸ್ಥೆ: ಗಾಝಾದಲ್ಲಿ ಆಹಾರ ವಿತರಣೆಯಲ್ಲಿನ ಅವ್ಯವಸ್ಥೆ, ಗೊಂದಲದಿಂದ ಸಾವು-ನೋವು ವರದಿಯಾದ ಬಳಿಕ ಅಮೆರಿಕ ಬೆಂಬಲಿತ ನೆರವು ವಿತರಣಾ ವ್ಯವಸ್ಥೆಯನ್ನು ವಿಶ್ವಸಂಸ್ಥೆ ಬುಧವಾರ ಖಂಡಿಸಿದೆ.

ಫೆಲೆಸ್ತೀನಿಯನ್ ಪ್ರದೇಶದಲ್ಲಿ ದೀರ್ಘಾವಧಿಯಿಂದ ಸಕ್ರಿಯವಾಗಿದ್ದ ವಿಶ್ವಸಂಸ್ಥೆ ನೇತೃತ್ವದ ನೆರವು ವಿತರಣಾ ವ್ಯವಸ್ಥೆಯನ್ನು ಬದಿಗೊತ್ತಿ ಅಮೆರಿಕ-ಇಸ್ರೇಲ್ ಬೆಂಬಲಿತ ಖಾಸಗಿ ಸಂಸ್ಥೆ `ಗಾಝಾ ಹ್ಯುಮಾನಿಟೇರಿಯನ್ ಫೌಂಡೇಷನ್'(ಜಿಎಚ್‍ಎಫ್) ಗಾಝಾದಲ್ಲಿ ನೆರವು ಪೂರೈಕೆಗೆ ಮುಂದಾಗಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ನೆರವು ಪೂರೈಕೆ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು ಇತರ 47 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಗಾಝಾದಲ್ಲಿ ವಿಶ್ವಸಂಸ್ಥೆ ಈಗಾಗಲೇ ನೆರವು ವಿತರಣಾ ವ್ಯವಸ್ಥೆಯನ್ನು ಹೊಂದಿರುವಾಗ ಹೊಸ ವ್ಯವಸ್ಥೆಯನ್ನು ರೂಪಿಸಿರುವುದು ಸಂಪನ್ಮೂಲಗಳನ್ನು ವ್ಯರ್ಥಗೊಳಿಸುವ ಮತ್ತು ದೌರ್ಜನ್ಯಗಳಿಂದ ಜಾಗತಿಕ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಫೆಲೆಸ್ತೀನಿಯನ್ ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಏಜೆನ್ಸಿಯ ಮುಖ್ಯಸ್ಥ ಫಿಲಿಪ್ ಲಝಾರಿನಿ ಟೀಕಿಸಿದ್ದಾರೆ.

ಸುರಕ್ಷಿತ ವಿತರಣಾ ಕೇಂದ್ರಗಳೆಂಬ ಜಿ ಎಚ್‍ ಎಫ್‍ ನ ಪ್ರತಿಪಾದನೆ ಮಾನವೀಯತೆಯ ತತ್ವವನ್ನು ಉಲ್ಲಂಘಿಸುತ್ತದೆ. ಯಾಕೆಂದರೆ ಆಹಾರ ಬೇಕಿದ್ದರೆ ತಾವು ಸೂಚಿಸಿದ ಸ್ಥಳಕ್ಕೆ ಹೋಗಿ ಎಂದು ಈಗಾಗಲೇ ಸ್ಥಳಾಂತರಗೊಂಡಿರುವ ಜನರನ್ನು ಬಲವಂತಗೊಳಿಸಿದಂತೆ ಆಗುತ್ತದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News