ಗಾಝಾದಲ್ಲಿ ನಾಗರಿಕರನ್ನು ರಕ್ಷಿಸಲು ವಿಶ್ವಸಂಸ್ಥೆ ಸಂಪೂರ್ಣ ವಿಫಲ: ವಿಶ್ವಸಂಸ್ಥೆ ಮಾನವ ಹಕ್ಕುಗಳ ತನಿಖಾಧಿಕಾರಿ ವರದಿ
►ವಿಶ್ವಸಂಸ್ಥೆಯಿಂದ ಇಸ್ರೇಲ್ ಅಮಾನತಿಗೆ ಆಗ್ರಹ
Photo Credit : hrw.org
ನ್ಯೂಯಾರ್ಕ್, ಅ.29: ಗಾಝಾದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ವಿನಾಶದ ಮತ್ತು ನರಮೇಧದ ಹೊಣೆಯನ್ನು ಪಾಶ್ಚಿಮಾತ್ಯ ದೇಶಗಳು ಹಂಚಿಕೊಳ್ಳಬೇಕು. ಗಾಝಾದಲ್ಲಿ ಫೆಲೆಸ್ತೀನೀಯರ ವಿರುದ್ಧ ಪೂರ್ಣ ಪ್ರಮಾಣದ ನರಮೇಧವನ್ನು ಅವರು ಸಕ್ರಿಯಗೊಳಿಸಿದ್ದಾರೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ತನಿಖಾಧಿಕಾರಿ ಫ್ರಾನ್ಸೆಸ್ಕಾ ಅಲ್ಬಾನೆಸ್ ಹೇಳಿದ್ದು ವಿಶ್ವಸಂಸ್ಥೆ ಸ್ವತಃ ಹೆಚ್ಚು ಅಪ್ರಸ್ತುತವಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.
ಫೆಲೆಸ್ತೀನಿಯನ್ ಪ್ರದೇಶಗಳಿಗಾಗಿನ ಮಾನವ ಹಕ್ಕುಗಳ ಪರಿಸ್ಥಿತಿ ಕುರಿತ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಫ್ರಾನ್ಸೆಸ್ಕಾ ಅಲ್ಬಾನೆಸ್ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಮೂರನೇ ಸಮಿತಿಗೆ ತನ್ನ ವರದಿಯನ್ನು ಮಂಗಳವಾರ ಹಸ್ತಾಂತರಿಸಿದ್ದಾರೆ.
` ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಲು ಮತ್ತು ಗಾಝಾದಲ್ಲಿ ನಾಗರಿಕರನ್ನು ರಕ್ಷಿಸಲು ವಿಶ್ವಸಂಸ್ಥೆ ದಯನೀಯವಾಗಿ ವಿಫಲವಾಗಿದೆ. ಶಾಂತಿ ಮತ್ತು ಸ್ಥಿರತೆಯನ್ನು ರಕ್ಷಿಸಲು, ಸಂಘರ್ಷಗಳನ್ನು ತಡೆಯಲು ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಯಿತು ಮತ್ತು ದೀರ್ಘಕಾಲದವರೆಗೆ ಈ ಕೆಲಸವನ್ನು ಮಾಡಿದೆ. ಆದರೆ ಗಾಝಾದಲ್ಲಿ ಅದು ದಯನೀಯವಾಗಿ ವಿಫಲವಾಗಿದೆ. ಅಂತರಾಷ್ಟ್ರೀಯ ಕಾನೂನನ್ನು ಜಾರಿಗೊಳಿಸಲು ವಿಫಲವಾಗಿದೆ. ಗಾಝಾದಲ್ಲಿ ತನ್ನ ಮಾನವೀಯ ಕಾರ್ಯಗಳನ್ನು ಸಂಪೂರ್ಣವಾಗಿ ಕಿತ್ತುಹಾಕಲು ಅವಕಾಶ ನೀಡಿದೆ ಎಂದು ಫೆಲೆಸ್ತೀನಿಯನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಏಜೆನ್ಸಿ(ಯುಎನ್ಆರ್ಡಬ್ಲ್ಯೂಎ)ಯನ್ನು ಉಲ್ಲೇಖಿಸಿ ಅಲ್ಬಾನೆಸ್ ಹೇಳಿದ್ದಾರೆ. ಫೆಲೆಸ್ತೀನಿಯನ್ ಪ್ರದೇಶಗಳಲ್ಲಿ ಯುಎನ್ಆರ್ಡಬ್ಲ್ಯೂಎ ಕಾರ್ಯನಿರ್ವಹಿಸುವುದನ್ನು ಇಸ್ರೇಲ್ ನಿಷೇಧಿಸಿದೆ.
ವಲಯದಲ್ಲಿ ಶಾಂತಿ ಮತ್ತು ಭದ್ರತೆಗೆ ಬೆದರಿಕೆ ಸೃಷ್ಟಿಸುತ್ತಿರುವ ಎರಡು ದೇಶಗಳನ್ನು(ಇಸ್ರೇಲ್ ಮತ್ತು ಅಮೆರಿಕಾ) ನಿಯಂತ್ರಿಸಲು ಅಥವಾ ಪ್ರತ್ಯೇಕಿಸಲು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಸಾಧ್ಯವಾಗಲಿಲ್ಲ. ಗಾಝಾದಲ್ಲಿ ಇಸ್ರೇಲ್ನ ನಿರಂತರ ಆಕ್ರಮಣ ಮತ್ತು ಮಿಲಿಟರಿ ಕಾರ್ಯಾಚರಣೆಗೆ ಪಾಶ್ಚಿಮಾತ್ಯ ದೇಶಗಳು ಮಿಲಿಟರಿ, ಆರ್ಥಿಕ ಮತ್ತು ರಾಜಕೀಯ ನೆರವು ಒದಗಿಸುತ್ತಿವೆ. ಇತರ ರಾಷ್ಟ್ರಗಳ ನೇರ ಪಾಲ್ಗೊಳ್ಳುವಿಕೆ, ಸಹಾಯವಿಲ್ಲದೆ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಇಸ್ರೇಲ್ ನ ಆಕ್ರಮಣ, ಸ್ವಾಧೀನ ಪ್ರಕ್ರಿಯೆ ಇಷ್ಟು ದೀರ್ಘಾವಧಿಯವರೆಗೆ ಮುಂದುವರಿಯಲು ಸಾಧ್ಯವೇ ಇಲ್ಲ ಎಂದು ಅಲ್ಬಾನೆಸ್ ಪ್ರತಿಪಾದಿಸಿದ್ದಾರೆ.
ಫೆಲೆಸ್ತೀನಿಯನ್ ಪ್ರದೇಶಗಳಲ್ಲಿ ಮಾನವ ಹಕ್ಕುಗಳ ನಿಂದನೆಯ ಬಗ್ಗೆ ತನಿಖೆ ನಡೆಸುತ್ತಿರುವುದಕ್ಕೆ ತನ್ನ ಮೇಲೆ ನಿಷೇಧ ಹೇರಿದ ಅಮೆರಿಕದ ಕ್ರಮಕ್ಕೆ ಸವಾಲೆಸೆಯುವಲ್ಲಿ ಜಾಗತಿಕ ಸರಕಾರಗಳು ವಿಫಲವಾಗಿವೆ ಎಂದು ಅಲ್ಬಾನೆಸ್ ಟೀಕಿಸಿದ್ದಾರೆ.
►ವಿಶ್ವಸಂಸ್ಥೆಯಿಂದ ಇಸ್ರೇಲ್ ಅಮಾನತಿಗೆ ಆಗ್ರಹ
ವಿಶ್ವಸಂಸ್ಥೆ ಚಾರ್ಟರ್ ನ 6ನೇ ಆರ್ಟಿಕಲ್ನಡಿ ಇಸ್ರೇಲನ್ನು ವಿಶ್ವಸಂಸ್ಥೆಯಿಂದ ಅಮಾನತುಗೊಳಿಸಬೇಕು. ಗಾಝಾದಿಂದ ಇಸ್ರೇಲ್ ಪಡೆಗಳ ಸಂಪೂರ್ಣ ವಾಪಸಾತಿ ಮತ್ತು ಶಾಶ್ವತ ಕದನ ವಿರಾಮ ಸ್ಥಾಪನೆಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಒತ್ತಡ ಹಾಕಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಚಾರ್ಟರ್(ಸನದು)ನ ತತ್ವಗಳನ್ನು ನಿರಂತರವಾಗಿ ಉಲ್ಲಂಘಿಸುವ ಸದಸ್ಯ ರಾಷ್ಟ್ರಗಳನ್ನು ಸಾಮಾನ್ಯ ಸಭೆಯಿಂದ ಹೊರಹಾಕಬಹುದು ಎಂದು ಆರ್ಟಿಕಲ್ 6 ಹೇಳುತ್ತದೆ.
ಎಲ್ಲಾ ಸರಕಾರಗಳೂ ಇಸ್ರೇಲ್ ನೊಂದಿಗೆ ಎಲ್ಲಾ ಮಿಲಿಟರಿ, ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು. ಇಂತಹ ಸಂಬಂಧಗಳು ಯುದ್ಧಾಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ನರಮೇಧದ ಅಕ್ರಮ ಕೃತ್ಯಗಳಿಗೆ ನೆರವು ನೀಡುವುದಕ್ಕೆ ಸಮವಾಗುತ್ತದೆ ಅಥವಾ ಇದರಲ್ಲಿ ನೇರವಾಗಿ ಪಾಲ್ಗೊಂಡಂತಾಗುತ್ತದೆ ಎಂದು ವರದಿಯಲ್ಲಿ ಆಗ್ರಹಿಸಲಾಗಿದೆ.