ಗಾಝಾ ಕದನ ವಿರಾಮ ಒಪ್ಪಂದ: ಇಸ್ರೇಲ್ ನಲ್ಲಿ ಸಮನ್ವಯ ಕೇಂದ್ರ ಆರಂಭಿಸಿದ ಅಮೆರಿಕ
PC:x.com/NavyTimes
ವಾಷಿಂಗ್ಟನ್: ಗಾಝಾ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯ ಮೇಲೆ ನಿಗಾ ವಹಿಸಲು ಹಾಗೂ ಶಾಂತಿ ಒಪ್ಪಂದದ ಅನುಷ್ಠಾನಕ್ಕೆ ನೆರವಾಗಲು ಅಮೆರಿಕ 200 ಮಂದಿ ತಜ್ಞರನ್ನು ಇಸ್ರೇಲ್ ನಲ್ಲಿ ನೇಮಕ ಮಾಡಿದೆ. ಈ ಮಿಷನ್ ಪಾಲುದಾರ ದೇಶಗಳ, ಸರ್ಕಾರೇತರ ಸಂಸ್ಥೆಗಳ ಮತ್ತು ಖಾಸಗಿ ವಲಯದ ಪಾಲುದಾರಿಕೆಯ ವಿಸ್ತೃತ ತಂಡದ ಭಾಗವಾಗಿರುತ್ತದೆ ಎಂದು ಅಧಿಕಾರಿಗಳು ಗುರುವಾರ ಪ್ರಕಟಿಸಿದ್ದಾರೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಮೆರಿಕದ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಈ ವಿಷಯವನ್ನು ಬಹಿರಂಗಪಡಿಸಿದ್ದು, ಅಮೆರಿಕದ ಸೆಂಟ್ರಲ್ ಕಮಾಂಡ್ ಇಸ್ರೇಲ್ ನಲ್ಲಿ ನಾಗರಿಕ- ಸೇನಾ ಸಮನ್ವಯ ಕೇಂದ್ರವನ್ನು ಆರಂಭಿಸಲಿದೆ. ಈ ಕೇಂದ್ರವು ಮಾನವೀಯ ನೆರವಿನ ಸುಲಲಿತ ಸಾಗಾಣಿಕೆಗೆ ಸೌಲಭ್ಯ ಕಲ್ಪಿಸಲಿದ್ದು, ಎರಡು ವರ್ಷಗಳ ಭೀಕರ ಕದನದಿಂದ ಜರ್ಜರಿತವಾಗಿರುವ ಗಾಝಾಗೆ ಸಾಗಾಣಿಕೆ ಮತ್ತು ಭದ್ರತಾ ನೆರವಿನ ಸಮನ್ವಯ ಕಾರ್ಯವನ್ನು ಸುಲಲಿತಗೊಳಿಸಲಿದೆ.
ಈ ಸಮನ್ವಯ ಕೇಂದ್ರದಲ್ಲಿ 200 ಮಂದಿ ಅಮೆರಿಕದ ಸೇವಾ ಸದಸ್ಯರು, ಸಾರಿಗೆ ಕ್ಷೇತ್ರದ ಪರಿಣಿತರು, ಯೋಜನೆ, ಭದ್ರತಾ, ಸರಕು ಸಾಗಾಣಿಕೆ ಮತ್ತು ಎಂಜಿನಿಯರಿಂಗ್ ಕ್ಷೇತ್ರದ ತಜ್ಞರ ಸೇರಿರುತ್ತಾರೆ. ಗಾಝಾಗೆ ಅಮೆರಿಕದ ಸೇನಾ ಸಿಬ್ಬಂದಿಯನ್ನು ಕಳುಹಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಹಾಗೂ ವಿಶ್ವದ ಇತರೆಡೆಗಳಿಂದ ಸಿಬ್ಬಂದಿ ಆಗಮಿಸಲಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಬಹಿರಂಗಪಡಿಸಿದ್ದಾರೆ. ಕೆಲ ಸಿಬ್ಬಂದಿ ಈಗಾಗಲೇ ಆಗಮಿಸಲು ಆರಂಭಿಸಿದ್ದು, ವಾರಾಂತ್ಯಕ್ಕೆ ಇತರರು ಆಗಮಿಸಿ ಹೊಸ ಕೇಂದ್ರವನ್ನು ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.