ಅಮೆರಿಕದಲ್ಲಿ ಹೊಸ ತೈಲ ಸಂಸ್ಕರಣಾಗಾರಕ್ಕೆ 300 ಬಿಲಿಯನ್ ಡಾಲರ್ ಒಪ್ಪಂದ: ರಿಲಯನ್ಸ್ ನಿಂದ ಹೂಡಿಕೆ, ‘ಭಾರಿ ಗೆಲುವು’ ಎಂದ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo credit: PTI)
ವಾಷಿಂಗ್ಟನ್: ಅಮೆರಿಕದಲ್ಲಿ ಹೊಸ ತೈಲ ಸಂಸ್ಕರಣಾಗಾರ ನಿರ್ಮಿಸಲು 300 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದರು. ಈ ಸಂಸ್ಕರಣಾಗಾರವು 50 ವರ್ಷಗಳ ಬಳಿಕ ಅಮೆರಿಕದಲ್ಲಿ ನಿರ್ಮಾಣವಾಗುವ ಮೊದಲ ಹೊಸ ಸಂಸ್ಕರಣಾಗಾರವಾಗಿದ್ದು, ಯೋಜನೆಗೆ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಹೂಡಿಕೆ ಮಾಡಲಿದೆ.
ಟೆಕ್ಸಾಸ್ ರಾಜ್ಯದ ಬ್ರೌನ್ಸ್ವಿಲ್ಲೆ ಬಂದರಿನಲ್ಲಿ ಈ ಸಂಸ್ಕರಣಾಗಾರವನ್ನು ನಿರ್ಮಿಸಲು ಯೋಜಿಸಲಾಗಿದೆ. ಯೋಜನೆಯಿಂದ ಇಂಧನ ಉತ್ಪಾದನೆ ಹೆಚ್ಚಳವಾಗುವುದರ ಜೊತೆಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರೂತ್ ಸೋಶಿಯಲ್’ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.
“ಅಮೆರಿಕಾ ನಿಜವಾದ ಇಂಧನ ಪ್ರಾಬಲ್ಯಕ್ಕೆ ಮರಳುತ್ತಿದೆ. ಇಂದು ‘ಅಮೆರಿಕಾ ಫಸ್ಟ್ ರಿಫೈನಿಂಗ್’ ಸಂಸ್ಥೆ ಟೆಕ್ಸಾಸ್ ನ ಬ್ರೌನ್ಸ್ವಿಲ್ಲೆಯಲ್ಲಿ 50 ವರ್ಷಗಳಲ್ಲಿ ಮೊದಲ ಹೊಸ ಯುಎಸ್ ತೈಲ ಸಂಸ್ಕರಣಾಗಾರವನ್ನು ತೆರೆಯುತ್ತಿದೆ ಎಂದು ಘೋಷಿಸಲು ನನಗೆ ಹೆಮ್ಮೆ ಇದೆ. ಇದು ಐತಿಹಾಸಿಕ 300 ಬಿಲಿಯನ್ ಡಾಲರ್ ಒಪ್ಪಂದ, ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡದು. ಅಮೆರಿಕದ ಕಾರ್ಮಿಕರು, ಇಂಧನ ವಲಯ ಮತ್ತು ದಕ್ಷಿಣ ಟೆಕ್ಸಾಸ್ ನ ಜನರಿಗೆ ಇದು ಭಾರಿ ಗೆಲುವು” ಎಂದು ಟ್ರಂಪ್ ಹೇಳಿದ್ದಾರೆ.
ಭಾರತದಲ್ಲಿರುವ, ಮತ್ತು ದೇಶದ ಅತಿದೊಡ್ಡ ಖಾಸಗಿ ಇಂಧನ ಕಂಪೆನಿಯಾದ ರಿಲಯನ್ಸ್ ಗೆ ಈ ಹೂಡಿಕೆಗಾಗಿ ಧನ್ಯವಾದಗಳನ್ನೂ ಅವರು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷರ ಪ್ರಕಾರ, ದೇಶೀಯ ಉದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಅವರ ಆಡಳಿತ ಕೈಗೊಂಡಿರುವ ನೀತಿಗಳಿಂದ ಈ ಸಂಸ್ಕರಣಾಗಾರ ಯೋಜನೆ ಸಾಧ್ಯವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
“ಅಮೆರಿಕಾ ಫಸ್ಟ್ ಕಾರ್ಯಸೂಚಿ, ಪರವಾನಗಿ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು ತೆರಿಗೆಗಳನ್ನು ಕಡಿಮೆ ಮಾಡುವ ಕ್ರಮಗಳಿಂದ ನಮ್ಮ ರಾಷ್ಟ್ರಕ್ಕೆ ಶತಕೋಟಿ ಡಾಲರ್ ಗಳ ಹೂಡಿಕೆಗಳು ಮರಳಿ ಬರುತ್ತಿವೆ” ಎಂದು ಅವರು ಹೇಳಿದ್ದಾರೆ.
ಬ್ರೌನ್ಸ್ವಿಲ್ಲೆ ಬಂದರಿನಲ್ಲಿ ನಿರ್ಮಾಣವಾಗಲಿರುವ ಈ ಹೊಸ ಸಂಸ್ಕರಣಾಗಾರವು ಅಮೆರಿಕದ ಮಾರುಕಟ್ಟೆಗಳಿಗೆ ಇಂಧನ ಪೂರೈಸುವುದರ ಜೊತೆಗೆ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ, ಅಮೆರಿಕದ ಇಂಧನ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಶತಕೋಟಿ ಡಾಲರ್ ಮೌಲ್ಯದ ಪರಿಣಾಮ ಉಂಟುಮಾಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
“ಇದು ವಿಶ್ವದ ಅತ್ಯಂತ ಸ್ವಚ್ಛವಾದ ಸಂಸ್ಕರಣಾಗಾರವಾಗಲಿದೆ. ಜಾಗತಿಕ ರಫ್ತುಗಳಿಗೆ ಇದು ಬೆಂಬಲ ನೀಡುತ್ತದೆ ಮತ್ತು ದಕ್ಷಿಣ ಟೆಕ್ಸಾಸ್ ಪ್ರದೇಶದಲ್ಲಿ ಸಾವಿರಾರು ಉದ್ಯೋಗಗಳು ಹಾಗೂ ಅಭಿವೃದ್ಧಿಯನ್ನು ತರಲಿದೆ. ಇದೇ ಅಮೆರಿಕದ ಇಂಧನ ಪ್ರಾಬಲ್ಯ. ಅಮೆರಿಕಾ ಮೊದಲು—ಯಾವಾಗಲೂ” ಎಂದು ಅವರು ಹೇಳಿದ್ದಾರೆ.
ತೈಲ, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿನ ಉತ್ಪಾದನೆಯನ್ನು ವಿಸ್ತರಿಸುವುದನ್ನು ಬೆಂಬಲಿಸುವ ‘ಇಂಧನ ಪ್ರಾಬಲ್ಯ’ ನೀತಿಯನ್ನು ಟ್ರಂಪ್ ಆಡಳಿತ ಮುಂದುವರಿಸುತ್ತಿರುವ ಸಂದರ್ಭದಲ್ಲಿ ಈ ಘೋಷಣೆ ಹೊರಬಂದಿದೆ.