ಕುಸಿತದ ಅಂಚಿನಲ್ಲಿ ಗಾಝಾ ಕದನ ವಿರಾಮ ಮಾತುಕತೆ: ವರದಿ
PC | X ;@mib_63
ದೋಹ: ಗಾಝಾ ಕದನ ವಿರಾಮ ಒಪ್ಪಂದ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದದ ಕುರಿತು ಖತರ್ ನಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಮಾತುಕತೆ ಕುಸಿತದ ಅಂಚಿಗೆ ತಲುಪಿದೆ ಎಂದು ಫೆಲೆಸ್ತೀನಿಯನ್ ಅಧಿಕಾರಿಗಳನ್ನು ಉಲ್ಲೇಖಿಸಿ ಬಿಬಿಸಿ ಶನಿವಾರ ವರದಿ ಮಾಡಿದೆ.
ಗಾಝಾದಲ್ಲಿ ಕದನ ವಿರಾಮ ಸಾಧಿಸುವ ಉದ್ದೇಶದ ಮಾತುಕತೆಯ ಪ್ರಗತಿಗೆ ಫೆಲಸ್ತೀನ್ ಪ್ರದೇಶದಿಂದ ಇಸ್ರೇಲ್ ಪಡೆಗಳ ವಾಪಸಾತಿ ವಿಷಯದ ಬಿಕ್ಕಟ್ಟು ಅಡ್ಡಿಯಾಗಿದೆ. ಇಸ್ರೇಲ್ ನ ಬಿಗಿಪಟ್ಟು ಕದನ ವಿರಾಮ ಒಪ್ಪಂದ ಅಂತಿಮಗೊಳ್ಳಲು ತೊಡ್ಡ ತೊಡಕಾಗಿದ್ದರೂ ಗಾಝಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಅಮೆರಿಕ ಮುಂದಿರಿಸಿದ ಪ್ರಸ್ತಾವನೆಯ ಬಗ್ಗೆ ಪರೋಕ್ಷ ಮಾತುಕತೆ ಖತರ್ ನ ದೋಹಾದಲ್ಲಿ ಮುಂದುವರಿಯಲಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಇಸ್ರೇಲ್ ಪ್ರಸ್ತಾಪಿಸಿದ ವಾಪಸಾತಿ ಯೋಜನೆಯನ್ನು ಹಮಾಸ್ ತಿರಸ್ಕರಿಸಿದೆ. ದಕ್ಷಿಣ ಗಾಝಾದ ರಫಾ, ಉತ್ತರ ಮತ್ತು ಪೂರ್ವ ಗಾಝಾ ಸೇರಿದಂತೆ ಗಾಝಾ ಪಟ್ಟಿಯಲ್ಲಿ ಈಗ ಇಸ್ರೇಲ್ ನ ನಿಯಂತ್ರಣದಲ್ಲಿರುವ ಸುಮಾರು 40%ದಷ್ಟು ಪ್ರದೇಶದಿಂದ ಪಡೆಗಳನ್ನು ಹಿಂಪಡೆಯುವುದಾಗಿ ಇಸ್ರೇಲ್ ಪ್ರಸ್ತಾಪಿಸಿದೆ.
ಈ ಹಿಂದಿನ ಕದನ ವಿರಾಮದ ಸಂದರ್ಭ ಇಸ್ರೇಲ್ ನ ನಿಯಂತ್ರಣದಲ್ಲಿದ್ದ ಪ್ರದೇಶಕ್ಕೆ ಇಸ್ರೇಲ್ ಪಡೆ ಹಿಂತಿರುಗಬೇಕೆಂದು ಹಮಾಸ್ ಬಯಸಿದೆ. ನೆರವು ವಿತರಣೆಯ ಕುರಿತ ಬಿಕ್ಕಟ್ಟು, ಮತ್ತು ಯುದ್ಧವನ್ನು ಕೊನೆಗೊಳಿಸುವುದಕ್ಕೆ ಖಾತರಿ ನೀಡುವ ವಿಷಯವೂ ಒಪ್ಪಂದಕ್ಕೆ ಸವಾಲನ್ನು ಒಡ್ಡಿದೆ. ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಅಮೆರಿಕದ ಹೆಚ್ಚಿನ ಪಾಲ್ಗೊಳ್ಳುವಿಕೆ ಈ ಬಿಕ್ಕಟ್ಟನ್ನು ಪರಿಹರಿಸಬಹುದು ಎಂದು ಫೆಲೆಸ್ತೀನಿಯನ್ ಮೂಲಗಳು ಹೇಳಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಶ್ವೇತಭವನ, ಕದನ ವಿರಾಮ ಪ್ರಸ್ತಾಪವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಶೀಘ್ರವೇ ದೋಹಾಕ್ಕೆ ತೆರಳಿ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದೆ.
ಕಳೆದ ರವಿವಾರದಿಂದ ಇಸ್ರೇಲ್ ಮತ್ತು ಹಮಾಸ್‍ನ ಉನ್ನತ ಮಟ್ಟದ ನಿಯೋಗಗಳು ಖತರ್ ನಲ್ಲಿದ್ದು ಕದನ ವಿರಾಮ ಒಪ್ಪಂದದ ಕುರಿತ ಮಾತುಕತೆಯಲ್ಲಿ ತೊಡಗಿವೆ. ಹಂತ ಹಂತವಾಗಿ ಒತ್ತೆಯಾಳುಗಳ ಬಿಡುಗಡೆ, ಇಸ್ರೇಲ್ ನ ಪಡೆಗಳ ವಾಪಸಾತಿ ಮತ್ತು ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವುದು ಪ್ರಸ್ತಾಪದ ಪ್ರಮುಖ ಅಂಶವಾಗಿದೆ. ಈ ವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭ ಇಸ್ರೇಲ್ `ಸಮಯವನ್ನು ಖರೀದಿಸಿದ್ದು ಯಾವುದೇ ಅಧಿಕಾರವಿಲ್ಲದ ನಿಯೋಗವನ್ನು ಖತರ್ ಗೆ ಕಳುಹಿಸುವ ಮೂಲಕ ಮಾತುಕತೆ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿದೆ ಎಂದು ಹಮಾಸ್ ಆರೋಪಿಸಿದೆ.
► ಗಾಝಾದಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ನೆರವು ವಿತರಣೆಗೆ ಹಮಾಸ್ ಆಗ್ರಹ
ಮಾನವೀಯ ನೆರವು ಹೆಚ್ಚಿನ ಪ್ರಮಾಣದಲ್ಲಿ ಗಾಝಾ ಪಟ್ಟಿ ಪ್ರದೇಶವನ್ನು ತಲುಪಬೇಕು ಮತ್ತು ವಿಶ್ವಸಂಸ್ಥೆ ಏಜೆನ್ಸಿಗಳ ಮೂಲಕ ವಿತರಣೆಯಾಗಬೇಕು ಎಂದು ಹಮಾಸ್ ಆಗ್ರಹಿಸಿದೆ. ಆದರೆ ಅಮೆರಿಕ-ಇಸ್ರೇಲ್ ಬೆಂಬಲಿತ `ಗಾಝಾ ಹ್ಯುಮಾನಿಟೇರಿಯನ್ ಫೌಂಡೇಷನ್(ಜಿಎಚ್‍ಎಫ್) ಮೂಲಕವೇ ನೆರವು ವಿತರಣೆ ಮುಂದುವರಿಯಬೇಕು ಎಂದು ಇಸ್ರೇಲ್ ಒತ್ತಾಯಿಸಿದೆ.
ಅಮೆರಿಕ ಮುಂದಿರಿಸಿದ ಪ್ರಸ್ತಾಪದ ಪ್ರಕಾರ ಗಾಝಾದಲ್ಲಿರುವ 20 ಜೀವಂತ ಒತ್ತೆಯಾಳುಗಳಲ್ಲಿ 10 ಜನರನ್ನು ಹಮಾಸ್ ಪ್ರಥಮ ಹಂತದಲ್ಲಿ ಬಿಡುಗಡೆಗೊಳಿಸಬೇಕು ಮತ್ತು 60 ದಿನಗಳ ಕದನ ವಿರಾಮದ ಅವಧಿಯಲ್ಲಿ 30 ಮೃತ ಒತ್ತೆಯಾಳುಗಳಲ್ಲಿ 15 ಒತ್ತೆಯಾಳುಗಳ ಮೃತದೇಹವನ್ನು ಹಿಂದಿರುಗಿಸಬೇಕು.