ಗಾಝಾ: ಇಸ್ರೇಲ್ ದಾಳಿಯಲ್ಲಿ ಮೃತರ ಸಂಖ್ಯೆ 104ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ | Photo : aljazeera.com
ಗಾಝಾ, ಅ.29: ಮಂಗಳವಾರ ರಾತ್ರಿ ಗಾಝಾದ ಮೇಲೆ ಇಸ್ರೇಲ್ ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ 46 ಮಕ್ಕಳು, 20 ಮಹಿಳೆಯರು ಸೇರಿದಂತೆ ಕನಿಷ್ಠ 104 ಫೆಲೆಸ್ತಿನೀಯರು ಸಾವನ್ನಪ್ಪಿದ್ದು 250ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಬುಧವಾರ ಹೇಳಿದೆ.
ಗಾಝಾ ಪಟ್ಟಿ, ಬೀಟ್ ಲಾಹಿಯಾ, ಬುರೇಜ್ ಮತ್ತು ನುಸಿರಾತ್, ದಕ್ಷಿಣದಲ್ಲಿ ಖಾನ್ ಯೂನಿಸ್ ನಗರಗಳಲ್ಲಿನ ಮನೆಗಳು, ಶಾಲೆಗಳು ಮತ್ತು ವಸತಿ ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆದಿದ್ದು ಹಲವು ಜನವಸತಿ ಪ್ರದೇಶಗಳಲ್ಲಿ ಸರಣಿ ಸ್ಫೋಟ ಸಂಭವಿಸಿದೆ. ಕನಿಷ್ಠ 104 ಮಂದಿ ಸಾವನ್ನಪ್ಪಿದ್ದು ಗಾಝಾ ನಗರದ ನೆರೆಹೊರೆಯ ದಕ್ಷಿಣ ಸಾಬ್ರಾದಲ್ಲಿ ಕುಸಿದು ಬಿದ್ದ ಕಟ್ಟಡದ ಅವಶೇಗಳಡಿಯಿಂದ ಮೂವರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದೆ ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ. ಸ್ಥಳಾಂತರಗೊಂಡವರಿಗಾಗಿ ಗಾಝಾ ಪಟ್ಟಿಯಲ್ಲಿ ನಿರ್ಮಿಸಿರುವ ಡೇರೆಗಳು, ಮನೆಗಳು, ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ನಡೆದಿರುವುದಾಗಿ ಹಮಾಸ್ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.