×
Ad

"ದುಃಖದಿಂದ ತಲೆ ತಗ್ಗಿಸುತ್ತಿದ್ದೇವೆ": ಗಾಝಾದಲ್ಲಿ ಇಸ್ರೇಲ್‌ನ ನರಮೇಧವನ್ನು ಖಂಡಿಸಿದ ಯಹೂದಿ ಗಣ್ಯರು

ಇಸ್ರೇಲ್ ಮೇಲೆ ನಿರ್ಬಂಧಗಳನ್ನು ಹೇರುವಂತೆ ಆಗ್ರಹ

Update: 2025-10-23 17:45 IST

Photo | X, Wikimedia commons

ಹೊಸದಿಲ್ಲಿ: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು 450ಕ್ಕೂ ಅಧಿಕ ಯಹೂದಿ ಗಣ್ಯರು ಖಂಡಿಸಿದ್ದಾರೆ.

ಇಸ್ರೇಲ್‌ ನ ಮಾಜಿ ಅಧಿಕಾರಿಗಳು, ಆಸ್ಕರ್ ಪ್ರಶಸ್ತಿ ಪುರಸ್ಕೃತರು, ಲೇಖಕರು ಮತ್ತು ಬುದ್ಧಿಜೀವಿಗಳು ಸೇರಿದಂತೆ 450ಕ್ಕೂ ಅಧಿಕ ಗಣ್ಯರು ಸಹಿ ಮಾಡಿರುವ ಬಹಿರಂಗ ಪತ್ರದಲ್ಲಿ, "ಇಸ್ರೇಲ್‌ನ ಕ್ರಮಗಳು ನರಮೇಧದ ಕಾನೂನು ವ್ಯಾಖ್ಯಾನವನ್ನು ಪೂರೈಸಿವೆ ಎನ್ನುವುದನ್ನು ಪುರಾವೆಗಳು ಸಾಬೀತುಗೊಳಿಸಿದ್ದು, ನಾವು ಅಪಾರ ದುಃಖದಿಂದ ತಲೆ ತಗ್ಗಿಸುತ್ತಿದ್ದೇವೆ" ಎಂದು ಹೇಳಲಾಗಿದೆ.

ಗಾಝಾ, ಆಕ್ರಮಿತ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಮ್‌ನಲ್ಲಿ ಇಸ್ರೇಲ್ ನಡೆಸಿದ ಅನ್ಯಾಯದ ಕೃತ್ಯಗಳು ನರಮೇಧಕ್ಕೆ ಸಮವಾಗಿವೆ ಎಂದು ಜರಿದಿರುವ ಈ ಯಹೂದಿ ಗಣ್ಯರು, ಇಸ್ರೇಲ್ ಮೇಲೆ ನಿರ್ಬಂಧಗಳನ್ನು ಹೇರುವಂತೆ ವಿಶ್ವಸಂಸ್ಥೆ ಮತ್ತು ಜಾಗತಿಕ ನಾಯಕರನ್ನು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ಮಾನವ ಹಕ್ಕುಗಳ ಉಲ್ಲಂಘನೆಗಳಿಗಾಗಿ ನಿರ್ಬಂಧಗಳ ಪ್ರಸ್ತಾವಗಳು ಮುಂದೂಡಲ್ಪಡಬಹುದು ಎಂಬ ವರದಿಗಳ ನಡುವೆಯೇ ಬೆಲ್ಜಿಯಮ್‌ನ ರಾಜಧಾನಿಯಲ್ಲಿ ಐರೋಪ್ಯ ಒಕ್ಕೂಟದ ನಾಯಕರ ಸಭೆಗೆ ಮುನ್ನ ಈ ಬಹಿರಂಗ ಪತ್ರವನ್ನು ಬರೆಯಲಾಗಿದೆ.

‘ಹತ್ಯಾಕಾಂಡವನ್ನು ತಡೆಯಲು ಮತ್ತು ಎಲ್ಲ ಮಾನವ ಜೀವಗಳ ಸುರಕ್ಷತೆಗಾಗಿ ಹಾಗೂ ರಕ್ಷಣೆಗಾಗಿ ತರಲಾದ ಹಲವಾರು ಕಾನೂನುಗಳು, ಸನ್ನದುಗಳು ಮತ್ತು ನಿರ್ಣಯಗಳನ್ನು ನಾವು ಮರೆತಿಲ್ಲ. ಈ ಎಲ್ಲ ಸುರಕ್ಷತಾ ಕ್ರಮಗಳನ್ನು ಇಸ್ರೇಲ್ ನಿರಂತರವಾಗಿ ಉಲ್ಲಂಘಿಸಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಪತ್ರಕ್ಕೆ ಸಹಿ ಹಾಕಿದವರಲ್ಲಿ ಇಸ್ರೇಲಿ ಶಾಂತಿ ಸಂಧಾನಕಾರ ಡೇನಿಯಲ್ ಲೆವಿ, ಇಸ್ರೇಲ್ ಸಂಸತ್ತಿನ ಮಾಜಿ ಸ್ಪೀಕರ್ ಅವ್ರಹಾಂ ಬರ್ಗ್, ಬ್ರಿಟಿಷ್ ಲೇಖಕ ಮೈಕಲ್ ರೋಸೆನ್, ಕೆನಡಾದ ಲೇಖಕಿ ನೊವೊಮಿ ಕ್ಲೈನ್, ಆಸ್ಕರ್ ವಿಜೇತ ಚಿತ್ರ ನಿರ್ಮಾಪಕ ಜೋನಾಥನ್ ಗ್ಲೇಝರ್, ಅಮೆರಿಕದ ನಟ ವಾಲೇಸ್ ಶಾನ್, ಎಮ್ಮಿ ಪ್ರಶಸ್ತಿ ವಿಜೇತರಾದ ಇಲಾನಾ ಗ್ಲೇಝರ್ ಮತ್ತು ಹನ್ನಾ ಐನ್‌ಬೈಂಡರ್, ಪುಲಿಟ್ಝರ್ ಪ್ರಶಸ್ತಿ ವಿಜೇತ ಬೆಂಜಾಮಿನ್ ಮೋಸರ್ ಮತ್ತಿರರರು ಸೇರಿದ್ದಾರೆ.

ಅಂತರರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ದ ತೀರ್ಪುಗಳನ್ನು ಗೌರವಿಸಲು ಮತ್ತು ಅವುಗಳಿಗೆ ವಿಧೇಯರಾಗಿರಲು ಹಾಗೂ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಹೊರಡಿಸಿರುವ ಬಂಧನ ವಾರಂಟ್‌ಗಳನ್ನು ಜಾರಿಗೊಳಿಸಲು ಹಾಗೂ ಈ ನ್ಯಾಯಾಲಯಗಳ ಕಾರ್ಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡುವ ಯಾವುದೇ ಅನುಚಿತ ಒತ್ತಡ ಅಥವಾ ಪ್ರಭಾವವನ್ನು ಪ್ರತಿರೋಧಿಸುವಂತೆ ಪತ್ರದಲ್ಲಿ ಜಾಗತಿಕ ನಾಯಕರನ್ನು ಆಗ್ರಹಿಸಲಾಗಿದೆ.

ಇದು ಉನ್ನತ ಮಟ್ಟದ ಯಹೂದಿ ಗಣ್ಯರು ಜಾಗತಿಕ ನಾಯಕರಿಗೆ ಬರೆದಿರುವ ಇಂತಹ ಮೊದಲ ಪತ್ರವಾಗಿದೆ ಎಂದು ಲೆವಿ ಬಣ್ಣಿಸಿದ್ದಾರೆ.

ಫೆಲೆಸ್ತೀನ್‌ನಿಗಳ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಅಪರಾಧಗಳು ಮತ್ತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಲ್ಲಿ ಭಾಗಿಯಾಗಲು ನಿರಾಕರಿಸುವಂತೆ ಜಾಗತಿಕ ನಾಯಕರನ್ನು ಪತ್ರವು ಆಗ್ರಹಿಸಿದೆ. ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳು ಮತ್ತು ಸಂಬಂಧಿತ ಸರಕುಗಳ ಪೂರೈಕೆಯನ್ನು ನಿಲ್ಲಿಸುವಂತೆ, ಜವಾಬ್ದಾರರಾದ ಅಧಿಕಾರಿಗಳು ಮತ್ತು ಸರಕಾರಿ ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ಹೇರುವಂತೆ ಹಾಗೂ ಈ ಉಲ್ಲಂಘನೆಗಳೊಂದಿಗೆ ಕೈಜೋಡಿಸಿರುವ ವಾಣಿಜ್ಯ ಸಂಸ್ಥೆಗಳೊಂದಿಗೆ ಸಂಬಂಧಗಳನ್ನು ಸ್ಥಗಿತಗೊಳಿಸುವಂತೆ ಯಹೂದಿ ಗಣ್ಯರು ಒತ್ತಾಯಿಸಿದ್ದಾರೆ.

ಗಾಝಾದಲ್ಲಿರುವ ಎಲ್ಲ ಫೆಲೆಸ್ತೀನಿಗಳಿಗೆ ಅವರ ತುರ್ತು ಅಗತ್ಯಕ್ಕೆ ಅನುಗುಣವಾಗಿ ಮಾನವೀಯ ನೆರವು ತಲುಪುವುದನ್ನು ಖಚಿತ ಪಡಿಸಿಕೊಳ್ಳುವ, ದಿಗ್ಬಂಧನವನ್ನು ತೆರವುಗೊಳಿಸುವ, ಪುನರ್‌ನಿರ್ಮಾಣ ಸಾಮಗ್ರಿಗಳಿಗೆ ಗಾಝಾದಲ್ಲಿ ಪ್ರವೇಶಾವಕಾಶ ಕಲ್ಪಿಸುವ ಮತ್ತು ಇಸ್ರೇಲಿ ಸೇನಾ ಪಡೆಗಳ ಸಂಪೂರ್ಣ ಹಿಂದೆಗೆತದ ಅಗತ್ಯವನ್ನೂ ಪತ್ರದಲ್ಲಿ ಒತ್ತಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News