×
Ad

ನೇಪಾಳದಲ್ಲಿ ಮತ್ತೆ ಅಶಾಂತಿ | ಹಿಂಸಾತ್ಮಕ ರೂಪ ಪಡೆದ ʼಜೆನ್ ಝೀʼ ಪ್ರತಿಭಟನೆ, ಕರ್ಫ್ಯೂ ಜಾರಿ

Update: 2025-11-20 18:07 IST

Screengrab : X

ಕಠ್ಮಂಡು : ನೇಪಾಳದ ಬಾರಾ ಜಿಲ್ಲೆಯಲ್ಲಿ ʼಜೆನ್ ಝೀʼ ಯುವಕರ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದು ಪೊಲೀಸರೊಂದಿಗೆ ಘರ್ಷಣೆಗೆ ನಡೆದಿದೆ. ಗುರವಾರ, ಎರಡನೇ ದಿನವೂ ಉದ್ವಿಗ್ನತೆ ಮುಂದುವರಿದಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಸರಕಾರವು ಮಧ್ಯಾಹ್ನ 1 ರಿಂದ ರಾತ್ರಿ 8ರವರೆಗೆ ಕರ್ಫ್ಯೂ ಹೇರಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಾರಾ ಜಿಲ್ಲೆಯ ಸಹಾಯಕ ಮುಖ್ಯ ಜಿಲ್ಲಾಅಧಿಕಾರಿ ಛಬಿರಾಮನ್ ಸುಬೇದಿ, “ಪೊಲೀಸರೊಂದಿಗೆ ಘರ್ಷಣೆ ಉಂಟಾದ ನಂತರ ಪರಿಸ್ಥಿತಿ ಹತೋಟಿಗೆ ತರಲು ಕರ್ಫ್ಯೂ ಜಾರಿಯಾಗಿದೆ” ಎಂದು ತಿಳಿಸಿದ್ದಾರೆ.

ಮುಂದಿನ ವರ್ಷ, ಮಾರ್ಚ್ 5, 2026ರಂದು ನೇಪಾಳದಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಚುನಾವಣೆಗೆ ಮುನ್ನ ಯುಎಂಎಲ್ (ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್) ನಾಯಕರು ಬಾರಾಕ್ಕೆ ಭೇಟಿ ನೀಡಲು ಸಿದ್ಧರಾಗುತ್ತಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಬುಧವಾರದಿಂದಲೇ ಜಿಲ್ಲೆಯಲ್ಲಿ ಉದ್ವಿಗ್ನತೆ ಏರತೊಡಗಿದೆ. ಸೆಪ್ಟೆಂಬರ್ ದಂಗೆಯ ನಂತರ ನೂರಾರು ಕೈದಿಗಳು ಪರಾರಿಯಾಗಿದ್ದಾರೆ ಹಾಗೂ ಶಸ್ತ್ರಾಸ್ತ್ರಗಳು ಕಾಣೆಯಾಗಿದೆ. ಇದು ಗಂಭೀರ ಭದ್ರತಾ ಲೋಪಗಳನ್ನು ಹುಟ್ಟುಹಾಕಿದೆ.

ವಿಮಾನ ನಿಲ್ದಾಣದ ಹತ್ತಿರದ ಸಿಮಾರಾ ಚೌಕ್‌ನಲ್ಲಿ ಬುಧವಾರ ನಡೆದ ಘರ್ಷಣೆಯಲ್ಲಿ ʼಜೆನ್ ಝೀʼ ಬೆಂಬಲಿಗರು ಗಾಯಗೊಂಡಿದ್ದು, ಆರು ಯುಎಂಎಲ್ (ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್) ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ʼಜೆನ್ ಝೀʼ ನಾಯಕ ಸಾಮ್ರಾಟ್ ಉಪಾಧ್ಯಾಯ (21) ಹೇಳುವಂತೆ, “ನಾವು ಶಾಂತಿಯುತವಾಗಿ ಸಭೆ ಸೇರಿದ್ದಾಗ ಯುಎಂಎಲ್ (ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್) ಕಾರ್ಯಕರ್ತರು ನಮ್ಮ ಮೇಲೆ ದಾಳಿ ನಡೆಸಿದರು. ಈ ವೇಳೆ ಏಳು ಮಂದಿ ಗಾಯಗೊಂಡಿದ್ದಾರೆ. ದಾಳಿಗೆ ಕಾರಣರಾದ ಮಹೇಶ್ ಬಾಸ್ನೆಟ್ ಹಾಗೂ ಇತರರನ್ನು ಬಂಧಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಘರ್ಷಣೆ ಹಿನ್ನೆಲೆಯಲ್ಲಿ ವಾರ್ಡ್ 2 ಅಧ್ಯಕ್ಷ ಧನ್ ಬಹದ್ದೂರ್ ಶ್ರೇಷ್ಠ ಮತ್ತು ವಾರ್ಡ್ 6 ಅಧ್ಯಕ್ಷ ಕೈಮುದಿನ್ ಅನ್ಸಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಮಾರಾ ವಿಮಾನ ನಿಲ್ದಾಣದ ಬಳಿಯ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಪೊಲೀಸರು ಅಶ್ರುವಾಯು ಬಳಸಿದರು. ಇದರಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಸೆಪ್ಟೆಂಬರ್ ದಂಗೆಯ ಬಳಿಕ ಮಧ್ಯಂತರ ಪ್ರಧಾನಿಯಾಗಿ ನೇಮಕಗೊಂಡಿರುವ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ“ಎಲ್ಲಾ ರಾಜಕೀಯ ಪಕ್ಷಗಳು ಅನಗತ್ಯ ಪ್ರಚೋದನೆಗಳಿಂದ ದೂರವಿದ್ದು, ಚುನಾವಣೆ ಪ್ರಕ್ರಿಯೆಯನ್ನು ಗೌರವಿಸಬೇಕು” ಎಂದು ಮನವಿ ಮಾಡಿದ್ದಾರೆ.

ಬುಧವಾರ ರಾತ್ರಿ ಅವರು ಬಿಡುಗಡೆ ಮಾಡಿದ ಪ್ರಕಟನೆಯಲ್ಲಿ “ಶಾಂತಿ, ಸುವ್ಯವಸ್ಥೆ ಕಾಪಾಡಲು ಗೃಹ ಮತ್ತು ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ರಾಜಕೀಯ ನಾಯಕರ ಸುರಕ್ಷಿತ ಚಲನವಲನ ಹಾಗೂ ನಿರ್ಭೀತ ವಾತಾವರಣದಲ್ಲಿ ಚುನಾವಣೆಗೆ ನಮ್ಮ ಆದ್ಯತೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News