‌ಸಾಂದರ್ಭಿಕ ಚಿತ್ರ (Image by ArtPhoto_studio on Freepik)

ವಾಷಿಂಗ್ಟನ್ ಡಿಸಿ : ಸಂಘರ್ಷವನ್ನು ಕೊನೆಗೊಳಿಸಿ ಹಾರ್ಮುಝ್ ಜಲಸಂಧಿಯನ್ನು ಮರುತೆರೆಯುವ ಇರಾನ್ನ ಶಾಂತಿ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಇದರ ಪರಿಣಾಮ ಸೋಮವಾರ ತೈಲ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿ ದಾಳಿ ನಡೆಸಿದ ಬಳಿಕ ಕಳೆದ ಏಳು ತಿಂಗಳಿಂದ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ನಿರಂತರ ಏರಿಳಿತ ಕಂಡುಬರುತ್ತಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 1.18ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 105.50 ಡಾಲರ್ಗೆ ತಲುಪಿದೆ. ಅದೇ ವೇಳೆ, ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಶೇ. 0.77ರಷ್ಟು ಏರಿಕೆಯಾಗಿ 93.12 ಡಾಲರ್ಗೆ ತಲುಪಿದೆ.

ಕಳೆದ ವಾರ ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇರಾನ್ ಶಾಂತಿ ಪ್ರಸ್ತಾಪವನ್ನು ಮುಂದಿಟ್ಟ ಬಳಿಕ ಈ ಬೆಲೆ ಏರಿಕೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ಖತರ್ ನ ಮಧ್ಯಸ್ಥಿಕೆಗಾರರ ಮೂಲಕ ಈ ಪ್ರಸ್ತಾಪವನ್ನು ಅಮೆರಿಕಕ್ಕೆ ತಲುಪಿಸಲಾಗಿತ್ತು ಎಂದು ಟೆಹ್ರಾನ್ ತಿಳಿಸಿತ್ತು. ಆದರೆ, ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

ಕಳೆದ ವಾರದ ಮಿಶ್ರ ವಹಿವಾಟಿನ ಬಳಿಕ ಇದೀಗ ತೈಲ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ದಾಖಲೆಯ ಮಟ್ಟದಲ್ಲಿರುವ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಅಮೆರಿಕ ಡೀಸೆಲ್ ರಫ್ತಿಗೆ ನಿರ್ಬಂಧ ವಿಧಿಸಬಹುದು ಎಂಬ ಆತಂಕದ ನಡುವೆ ವಾರದ ಅವಧಿಯಲ್ಲಿ WTI ಬೆಲೆ ಶೇ. 7.9ರಷ್ಟು ಕುಸಿದಿತ್ತು. ಆದರೆ, ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 0.4ರಷ್ಟು ಅಲ್ಪ ಏರಿಕೆ ಕಂಡಿತ್ತು.

ಅಮೆರಿಕ ಡೀಸೆಲ್ ರಫ್ತಿಗೆ ನಿರ್ಬಂಧ ವಿಧಿಸಿದರೆ ದೇಶದ ಸಂಸ್ಕರಣಾ ಉತ್ಪಾದನೆಯೂ ಕಡಿಮೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಅಮೆರಿಕದಿಂದ ಡೀಸೆಲ್ ಪೂರೈಕೆ ಕಡಿಮೆಯಾಗುವ ನಿರೀಕ್ಷೆಯಿಂದ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಬೆಲೆಗಳು ಏರಿಕೆಯಾಗಿವೆ. ಇದರಿಂದ ಅಮೆರಿಕದ ಹೊರಗಿನ ಮಾರುಕಟ್ಟೆಗಳಲ್ಲಿ ಡೀಸೆಲ್ ಪೂರೈಕೆ ಮತ್ತಷ್ಟು ಬಿಗಿಗೊಳ್ಳುವ ಸಾಧ್ಯತೆಯಿದೆ.

ನಿರಂತರ ಉದ್ವಿಗ್ನತೆಯ ನಡುವೆಯೂ ಸೆಪ್ಟೆಂಬರ್ನಲ್ಲಿ ಪ್ರಮುಖ ಮಧ್ಯಪ್ರಾಚ್ಯ ತೈಲ ಉತ್ಪಾದಕರ ರಫ್ತು ಪ್ರಮಾಣದಲ್ಲಿ ಚೇತರಿಕೆ ಕಂಡುಬಂದಿದೆ. ಪ್ರಮುಖ ಉತ್ಪಾದಕರ ಕಚ್ಚಾ ತೈಲ ರಫ್ತು ದಿನಕ್ಕೆ 12.8 ಮಿಲಿಯನ್ ಬ್ಯಾರೆಲ್ಗಳಿಗೆ ಏರಿಕೆಯಾಗಿದ್ದು, ಫೆಬ್ರವರಿಯಲ್ಲಿ ಯುದ್ಧ ಆರಂಭವಾದ ಬಳಿಕದ ಗರಿಷ್ಠ ಮಟ್ಟ ಇದಾಗಿದೆ ಎಂದು ಕೆಪ್ಲರ್ (Kpler)ನ ಪ್ರಾಥಮಿಕ ಅಂಕಿಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor