ಅ.7ರ ದಾಳಿ ಕುರಿತು ಮುನ್ನೆಚ್ಚರಿಕೆ ವಿವಾದದ ನಡುವೆ ನೆತನ್ಯಾಹು–ಯುಎಇ ಅಧ್ಯಕ್ಷರ ಗೌಪ್ಯ ಭೇಟಿ : ವರದಿ
ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ , ಬೆಂಜಮಿನ್ ನೆತನ್ಯಾಹು | Photo Credit : PTI
ಅಬುಧಾಬಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ರವಿವಾರ ಅಬುಧಾಬಿಗೆ ಭೇಟಿ ನೀಡಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರನ್ನು ಗೌಪ್ಯವಾಗಿ ಭೇಟಿಯಾಗಿದ್ದಾರೆ ಎಂದು ಇಸ್ರೇಲ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವ ಬಗ್ಗೆ ರಾಯಿಟರ್ಸ್ ವರದಿ ಮಾಡಿದೆ.
ಆದರೆ, ಈ ಭೇಟಿಯ ಬಗ್ಗೆ ನೆತನ್ಯಾಹು ಅವರ ಕಚೇರಿ ಅಥವಾ ಯುಎಇ ವಿದೇಶಾಂಗ ಸಚಿವಾಲಯ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸುವ ಸುಮಾರು ಒಂದೂವರೆ ವಾರ ಮುನ್ನ, ಹಮಾಸ್ ದೊಡ್ಡ ಮಟ್ಟದ ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂದು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಅವರು ನೆತನ್ಯಾಹು ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು ಇಸ್ರೇಲ್‌ನ ‘ಹಾರೆಟ್ಜ್’ ಪತ್ರಿಕೆ ವರದಿ ಮಾಡಿತ್ತು.
ಹಮಾಸ್ ನ ಈ ಸಿದ್ಧತೆಯ ಬಗ್ಗೆ ನೀಡಲಾಗಿದ್ದ ಎಚ್ಚರಿಕೆಯನ್ನು ಇಸ್ರೇಲ್ ನ ಗುಪ್ತಚರ ಸಂಸ್ಥೆಗಳು ಅಥವಾ ಸೇನೆಗೆ ರವಾನಿಸಲಾಗಿರಲಿಲ್ಲ ಎಂದು ‘ಹಾರೆಟ್ಜ್’ ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯನ್ನು ನೆತನ್ಯಾಹು ನಿರಾಕರಿಸಿದ್ದಾರೆ. ಅಲ್ಲದೆ, ತಪ್ಪು ಮಾಹಿತಿ ಪ್ರಕಟಿಸಿರುವ ಆರೋಪದ ಮೇಲೆ ‘ಹಾರೆಟ್ಜ್’ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.
2023ರ ಅಕ್ಟೋಬರ್ 7ರ ಹಮಾಸ್ ದಾಳಿಗೂ ಮುನ್ನ ಭದ್ರತಾ ವ್ಯವಸ್ಥೆಯಲ್ಲಿ ಉಂಟಾದ ವೈಫಲ್ಯಗಳಿಗೆ ನೆತನ್ಯಾಹು ಅವರೇ ಹೊಣೆ ಎಂದು ಇಸ್ರೇಲ್ ವಿರೋಧ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಇದರ ನಡುವೆಯೇ ನೆತನ್ಯಾಹು ಮರುಚುನಾವಣೆಗೆ ಕಠಿಣ ಪ್ರಚಾರ ಎದುರಿಸುತ್ತಿದ್ದಾರೆ.
‘ಹಾರೆಟ್ಜ್’ ವರದಿಯಲ್ಲಿ ಮಾಡಿರುವ ಆರೋಪಗಳ ಬಗ್ಗೆ ಯುಎಇ ಯಾವುದೇ ನೇರ ಪ್ರತಿಕ್ರಿಯೆ ನೀಡಿಲ್ಲ. ಆದರೆ, 2020ರ ಅಬ್ರಹಾಂ ಒಪ್ಪಂದದ ಮೂಲಕ ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿದ ಬಳಿಕ ಎರಡೂ ದೇಶಗಳು ‘ಮುಕ್ತ ಮತ್ತು ನೇರ ಸಂವಹನ ಮಾರ್ಗಗಳನ್ನು’ ಕಾಯ್ದುಕೊಂಡಿವೆ ಎಂದು ಯುಎಇ ಹೇಳಿದೆ.
ಆದರೆ, ಭದ್ರತಾ ವಿಷಯಗಳನ್ನು ಇತರ ದೇಶಗಳೊಂದಿಗೆ ರಾಷ್ಟ್ರೀಯ ನಾಯಕರ ನೇರ ಮಾತುಕತೆಯ ಮೂಲಕ ಚರ್ಚಿಸುವುದಿಲ್ಲ. ಇಂತಹ ವಿಷಯಗಳನ್ನು ‘ಸಂಬಂಧಿತ ಸಂಸ್ಥೆಗಳ’ ಮೂಲಕ ಚರ್ಚಿಸಲಾಗುತ್ತದೆ ಎಂದು ಯುಎಇ ಮೂಲವೊಂದು ಈ ಹಿಂದೆ ರಾಯಿಟರ್ಸ್‌ಗೆ ತಿಳಿಸಿತ್ತು.
ನೆತನ್ಯಾಹು ಮತ್ತು ಶೇಖ್ ಮೊಹಮ್ಮದ್ ಈ ಹಿಂದೆ ಕೂಡ ಯುಎಇಯಲ್ಲಿ ಖಾಸಗಿ ಭೇಟಿಯಾಗಿದ್ದರು ಎಂಬ ವರದಿಗಳು ಬಂದಿದ್ದವು.
ಮೇ ತಿಂಗಳಲ್ಲಿ ನೆತನ್ಯಾಹು ಅವರ ಕಚೇರಿ, ಇಸ್ರೇಲ್ ಪ್ರಧಾನಿ ಯುಎಇಗೆ ರಹಸ್ಯವಾಗಿ ಭೇಟಿ ನೀಡಿ ಶೇಖ್ ಮೊಹಮ್ಮದ್ ಅವರನ್ನು ಭೇಟಿಯಾಗಿದ್ದರು ಎಂದು ಹೇಳಿತ್ತು. ಆದರೆ, ನೆತನ್ಯಾಹು ಅವರನ್ನು ಭೇಟಿಯಾಗಿದ್ದಾಗಿ ಶೇಖ್ ಮೊಹಮ್ಮದ್ ಅವರ ಪರವಾಗಿ ಯುಎಇ ನಿರಾಕರಿಸಿತ್ತು.
ಬಳಿಕ ಮೂಲವೊಂದು, ಮಾರ್ಚ್ 26ರಂದು ಅಬುಧಾಬಿಯ ಅಲ್-ಐನ್ ನಗರದಲ್ಲಿ ಇಬ್ಬರೂ ನಾಯಕರು ಭೇಟಿಯಾಗಿದ್ದರು ಎಂದು ತಿಳಿಸಿತ್ತು. ಅಲ್-ಐನ್ ಒಮಾನ್ ಗಡಿಯ ಸಮೀಪದಲ್ಲಿರುವ ಓಯಸಿಸ್ ನಗರವಾಗಿದೆ.
ಇರಾನ್ ಯುದ್ಧದ ಸಂದರ್ಭದಲ್ಲಿ ಯುಎಇ ದಾಳಿಗೆ ಗುರಿಯಾದ ಬಳಿಕ ಅಮೆರಿಕ ಮತ್ತು ಇಸ್ರೇಲ್‌ನೊಂದಿಗೆ ತನ್ನ ಸಂಬಂಧವನ್ನು ಯುಎಇ ಮತ್ತಷ್ಟು ಬಲಪಡಿಸಿಕೊಂಡಿದೆ.
2020ರ ಅಬ್ರಹಾಂ ಒಪ್ಪಂದದ ಮೂಲಕ ಇಸ್ರೇಲ್‌ನೊಂದಿಗೆ ಸ್ಥಾಪಿಸಿದ ರಾಜತಾಂತ್ರಿಕ ಸಂಬಂಧವು ಯುಎಇಗೆ ಪ್ರಾದೇಶಿಕ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಹಾಗೂ ಅಮೆರಿಕದೊಂದಿಗೆ, ವಿಶೇಷವಾಗಿ ವಾಷಿಂಗ್ಟನ್ ನೊಂದಿಗೆ, ಸಂವಹನ ನಡೆಸಲು ಒಂದು ಮಾರ್ಗವನ್ನು ಒದಗಿಸಿದೆ.