ಗ್ವಾಟೆಮಾಲಾ ತಲುಪಿದ ಅಮೆರಿಕ ವಲಸಿಗರ ಗಡೀಪಾರು ವಿಮಾನ
ನ್ಯೂಯಾರ್ಕ್: ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆಯ ಅಂಗವಾಗಿ ಅಮೆರಿಕದಿಂದ ಹೊರಹಾಕಲ್ಪಟ್ಟ 200ಕ್ಕೂ ಅಧಿಕ ವಲಸಿಗರನ್ನು ಹೊತ್ತ ಅಮೆರಿಕದ ವಿಮಾನಗಳು ಗ್ವಾಟೆಮಾಲಾಕ್ಕೆ ಆಗಮಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಮಿಲಿಟರಿಯ ಎರಡು ವಿಮಾನಗಳು ಹಾಗೂ ಬಾಡಿಗೆ ವಿಮಾನದ ಮೂಲಕ ಒಟ್ಟು 265 ಅಕ್ರಮ ವಲಸಿಗರು ಗ್ವಾಟೆಮಾಲ ತಲುಪಿದ್ದಾರೆ. ಜತೆಗೆ ಗುರುವಾರ ಮೆಕ್ಸಿಕೋಗೆ 4 ಗಡೀಪಾರು ವಿಮಾನಗಳ ಮೂಲಕ ಅಕ್ರಮ ವಲಸಿಗರನ್ನು ರವಾನಿಸಲಾಗಿದೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. ಆದರೆ ವಿಮಾನಗಳ ಆಗಮನ ಅಥವಾ ವಲಸಿಗರ ಕುರಿತ ಯಾವುದೇ ಒಪ್ಪಂದದ ಬಗ್ಗೆ ಮೆಕ್ಸಿಕೋ ಸರಕಾರ ದೃಢಪಡಿಸಿಲ್ಲ. ಆದರೆ, ತನ್ನ ನಾಗರಿಕರನ್ನು ಅಮೆರಿಕ ಗಡೀಪಾರು ಮಾಡಿದರೆ ಅವರನ್ನು ತೆರೆದ ಬಾಹುಗಳೊಂದಿಗೆ ಸ್ವಾಗತಿಸಲಾಗುವುದು ಎಂದು ಮೆಕ್ಸಿಕೋದ ವಿದೇಶಾಂಗ ಇಲಾಖೆ ಶುಕ್ರವಾರ ಹೇಳಿದೆ.
ಈ ಮಧ್ಯೆ, ಗುರುವಾರ 538 ಮತ್ತು ಶುಕ್ರವಾರ 593 ಅಕ್ರಮ ವಲಸಿಗ ಕ್ರಿಮಿನಲ್‍ಗಳನ್ನು ಬಂಧಿಸಲಾಗಿದ್ದು ಮಿಲಿಟರಿ ಯುದ್ಧವಿಮಾನಗಳ ಮೂಲಕ ಗಡೀಪಾರು ಮಾಡಲಾಗುವುದು ಎಂದು ಶುಕ್ರವಾರ ಶ್ವೇತಭವನದ ಅಧಿಕಾರಿಗಳು ಹೇಳಿದ್ದರು.