×
Ad

ಅಪ್ರಾಪ್ರ ವಯಸ್ಕಳಿಗೆ ಟ್ರಂಪ್ ದೌರ್ಜನ್ಯದ ಆರೋಪವಿದ್ದ, ಕಾಣೆಯಾಗಿದ್ದ ಎಪ್‌ಸ್ಟೀನ್ ಫೈಲ್‌ಗಳ ಬಿಡುಗಡೆ

Update: 2026-03-06 17:37 IST

PC: PTI 

ವಾಷಿಂಗ್ಟನ್: ಅಮೆರಿಕದ ನ್ಯಾಯ ಇಲಾಖೆಯು ಎಪ್‌ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದ ಹೊಸ ದಾಖಲೆಗಳನ್ನು ಬಿಡುಗಡೆ ಮಾಡಿದೆ. ತಾನು 13-15 ವರ್ಷದವಳಾಗಿದ್ದಾಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಮಹಿಳೆಯೋರ್ವಳು ಈ ದಾಖಲೆಗಳಲ್ಲಿ ಆರೋಪಿಸಿದ್ದಾಳೆ.

ಈವರೆಗೆ ಬಿಡುಗಡೆಯಾದ ದಾಖಲೆಗಳಿಂದ ನಾಪತ್ತೆಯಾಗಿದ್ದ ಫೈಲ್‌ಗಳು 2019ರಲ್ಲಿ ಮಹಿಳೆ ಎಫ್‌ಬಿಐಗೆ ನೀಡಿರುವ ಹೇಳಿಕೆಗೆ ಸಂಬಂಧಿಸಿವೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ನ್ಯೂಯಾರ್ಕ್‌ನಲ್ಲಿ ಅಥವಾ ನ್ಯೂಜೆರ್ಸಿಯಲ್ಲಿ ತನ್ನನ್ನು ಟ್ರಂಪ್‌ಗೆ ಪರಿಚಯಿಸಿದ್ದ ಎಂದು ಆಕೆ ಹೇಳಿಕೆಯಲ್ಲಿ ಆರೋಪಿಸಿದ್ದಾಳೆ.

ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಒಳಗೊಂಡಿದ್ದ ಲೈಂಗಿಕ ಕಳ್ಳಸಾಗಣೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ಆರೋಪದಲ್ಲಿ ಎಪ್‌ಸ್ಟೀನ್ ವಿರುದ್ಧ ತನಿಖೆಯ ಭಾಗವಾಗಿ ಎಫ್‌ಬಿಐ ಅಧಿಕಾರಿಗಳು 2019ರಲ್ಲಿ ನಡೆಸಿದ್ದ ಸಂದರ್ಶನಗಳ ಸಾರಾಂಶಗಳನ್ನು ಈ ದಾಖಲೆಗಳು ಹೊಂದಿವೆ.

ಈಗ ಬಹಿರಂಗಗೊಂಡಿರುವ ದಾಖಲೆಗಳಂತೆ ಟ್ರಂಪ್ ತನ್ನನ್ನು ಮೌಖಿಕ ಲೈಂಗಿಕ ಕ್ರಿಯೆಗೆ ಬಲವಂತಗೊಳಿಸಲು ಪ್ರಯತ್ನಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ ಎಂದು ಸುದ್ದಿಸಂಸ್ಥೆ ರಾಯ್ಟರ್ಸ್ ವರದಿ ಮಾಡಿದೆ.

ತಾನು ಅದನ್ನು ತಿರಸ್ಕರಿಸಿದಾಗ ಟ್ರಂಪ್ ತನಗೆ ಹೊಡೆದಿದ್ದರು ಎಂದೂ ಮಹಿಳೆ ಆರೋಪಿಸಿದ್ದಾಳೆ.

ದಾಖಲೆಗಳಲ್ಲಿ ಕೆಲವು ಟ್ರಂಪ್ ಕುರಿತು ಸುಳ್ಳು ಮತ್ತು ಸಂವೇದನಾಶೀಲ ಹೇಳಿಕೆಗಳನ್ನು ಒಳಗೊಂಡಿವೆ ಎಂದು ನ್ಯಾಯ ಇಲಾಖೆಯು ಎಚ್ಚರಿಸಿದೆ ಮತ್ತು ತಾನು ಆರೋಪಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಿಲ್ಲ ಎಂದು ರಾಯ್ಟರ್ಸ್ ಹೇಳಿದೆ.

ಇಲಾಖೆಯು ಈ ಹಿಂದೆ ಪುನರಾವರ್ತಿತ ಎಂದು ತಪ್ಪಾಗಿ ಕೋಡ್ ಮಾಡಲಾಗಿದ್ದ 15 ಫೈಲ್‌ಗಳಲ್ಲಿ ಈ ದಾಖಲೆಗಳು ಸೇರಿದ್ದವು,ಹೀಗಾಗಿ ಅವುಗಳನ್ನು ಈ ಹಿಂದೆ ಬಿಡುಗಡೆ ಮಾಡಿರಲಿಲ್ಲ.

ನ್ಯಾಯ ಇಲಾಖೆಯಿಂದ ಎಪ್‌ಸ್ಟೀನ್ ತನಿಖೆಗೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆಯ ಕುರಿತು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಪರಿಶೀಲನೆಯ ನಡುವೆ ಈ ದಾಖಲೆಗಳು ಬಹಿರಂಗಗೊಂಡಿವೆ.

ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ, ಅವುಗಳಿಗೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೀವಿಟ್ ಹೇಳಿದ್ದಾರೆ.

ಎಪ್‌ಸ್ಟೀನ್ ಜೊತೆ ತನ್ನ ಒಡನಾಟವು 2000ರ ದಶಕದ ಮಧ್ಯಭಾಗದಲ್ಲಿ ಕೊನೆಗೊಂಡಿತ್ತು ಮತ್ತು ಆತನಿಂದ ಅಪ್ರಾಪ್ತ ವಯಸ್ಕ ಬಾಲಕಿಯರ ಶೋಷಣೆ ಬಗ್ಗೆ ತನಗೆ ತಿಳಿದಿಲ್ಲ ಎಂದು ಟ್ರಂಪ್ ಹಿಂದೆ ಹೇಳಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News