ವೆನೆಝುವೆಲಾ ಅಧ್ಯಕ್ಷರ ಅರಮನೆ ಮುಂದೆ ಗುಂಡಿನ ಕಾಳಗ; ಉದ್ವಿಗ್ನ ಸ್ಥಿತಿ
ಕಾರಾಕಾಸ್: ಅಮೆರಿಕ ಪಡೆಗಳು ಸೆರೆ ಹಿಡಿದಿರುವ ಅಧ್ಯಕ್ಷ ನಿಕೋಲಸ್ ಮರುಡೊ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಲುವಾಗಿ ನ್ಯೂಯಾರ್ಕ್ ನ ಫೆಡರಲ್ ಕೋರ್ಟ್ ಹೌಸ್ ಗೆ ಕರೆತರಲಾಗಿದೆ. ಅಮೆರಿಕ ಪಡೆಗಳು ಅಧ್ಯಕ್ಷರನ್ನು ಸೆರೆಹಿಡಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮರುಡೊ ಕಾಣಿಸಿಕೊಂಡಿದ್ದಾರೆ. ಇನ್ನೊಂದೆಡೆ ಮರುಡೊ ಅವರ ಉತ್ತರಾಧಿಕಾರಿಯಾಗಿ ಡೆಲ್ಸಿ ರೋಡ್ರಿಗಸ್ ಅಧಿಕಾರ ವಹಿಸಿಕೊಂಡಿದ್ದು, ಅಮೆರಿಕದ ಜತೆ ಸಹಕರಿಸಲು ಸಿದ್ಧ ಎಂದು ಪ್ರಕಟಿಸಿದ್ದಾರೆ. ಏತನ್ಮಧ್ಯೆ ಅಧ್ಯಕ್ಷೀಯ ಅರಮನೆ ಬಳಿಯೇ ಹೊಸದಾಗಿ ಗುಂಡಿನ ಕಾಳಗ ನಡೆಯುತ್ತಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಅಮೆರಿಕ ಪಡೆಗಳು ಶನಿವಾರ ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮರುಡೊ ಹಾಗೂ ಅವರ ಪತ್ನಿಯನ್ನು ಸೆರೆಹಿಡಿದಿದ್ದು, ಇಬ್ಬರನ್ನೂ ಅಪರಾಧ ಆರೋಪಗಳಡಿ ನ್ಯೂಯಾರ್ಕ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಅಮೆರಿಕ ದೇಶ ವೆನೆಝುವೆಲಾವನ್ನು ಮುನ್ನಡೆಸಲಿದ್ದು, ಅಧಿಕಾರ ಹಸ್ತಾಂತರನಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
"ಸುರಕ್ಷಿತ, ಸಮರ್ಪಕ ಹಾಗೂ ನ್ಯಾಯಸಮ್ಮತ ವರ್ಗಾಂತರದ ಪರಿಸ್ಥಿತಿ ಬರುವವರೆಗೂ ನಾವು ಆ ದೇಶವನ್ನು ಮುನ್ನಡೆಸಲಿದ್ದೇವೆ" ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಮರುಡೋ ಅವರ ಅನುಪಸ್ಥಿತಿಯಲ್ಲಿ ವೆನೆಝುವೆಲಾ ಸುಪ್ರೀಂಕೋರ್ಟ್, ದೇಶದ ಉಪಾಧ್ಯಕ್ಷೆ ಡೆಲ್ಸಿ ರೋಡ್ರಿಗಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೊ ಸೋಮವಾರ ಹೇಳಿಕೆ ನೀಡಿ, ಟ್ರಂಪ್ ಅವರ ಬೆದರಿಕೆ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವೆನೆಝುವೆಲಾ ಮೇಲೆ ಅಮೆರಿಕ ದಾಳಿ ನಡೆಸಿದ ಕ್ರಮವನ್ನು ಖಂಡಿಸಿರುವ ಚೀನಾ, ರಷ್ಯಾ ಮತ್ತು ಇತರ ದೇಶಗಳು ವೆನೆಝುವೆಲಾಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿವೆ. ದೇಶದ ಅಧ್ಯಕ್ಷರ ಮೇಲೆ ಬಲಪ್ರಯೋಗ ಮಾಡುವ ಮೂಲಕ ದೇಶದ ಸಾರ್ವಭೌಮತ್ವದ ಮೇಲೆ ಅಮೆರಿಕ ದಾಳಿ ನಡೆಸಿದೆ ಎಂದು ಚೀನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.