×
Ad

ಅಮೆರಿಕದ ಮಾನವಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿ ಹರ್‌ಮೀತ್ ಧಿಲ್ಲೋನ್ ನೇಮಕ

Update: 2024-12-10 22:28 IST

 ಹರ್‌ಮೀತ್ ಧಿಲ್ಲೋನ್ | PC : PTI 

ವಾಶಿಂಗ್ಟನ್ : ಭಾರತೀಯ ಮೂಲದ ಅಮೆರಿಕನ್ ಮಹಿಳೆ ಹರ್‌ಮೀತ್ ಕೆ. ಧಿಲ್ಲೋನ್ ಅವರನ್ನು ನ್ಯಾಯಾಂಗ ಇಲಾಖೆಯ ಮಾನವಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ (ಡಿಓಜೆ) ಆಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಮಂಗಳವಾರ ನಾಮಕರಣಗೊಳಿಸಿದ್ದಾರೆ.

ಸಿಖ್ಖ್ ಧರ್ಮದವರಾದ ಧಿಲ್ಲೋನ್ ಅವರು ಡಾರ್ಟ್‌ಮೌತ್‌ಕಾಲೇಜ್ ಹಾಗೂ ವರ್ಜಿನಿಯಾ ಕಾನೂನು ವಿದ್ಯಾಲಯದ ಪದವೀಧರೆಯಾಗಿದ್ದಾರೆ. ಅಮೆರಿಕದ ಫೋರ್ತ್ ಸರ್ಕಿಟ್ ಕೋರ್ಟ್ ಆಫ್ ಅಪೀಲ್ಸ್‌ನಲ್ಲಿಯೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ.

ತನ್ನ ವೃತ್ತಿ ಜೀವನದುದ್ದಕ್ಕೂ ನಮ್ಮ ಮಾನವ ಸ್ವಾತಂತ್ರ್ಯಗಳನ್ನು ರಕ್ಷಿಸಲು ಹರ್‌ಮೀತ್ ಅವರು ನಿರಂತರವಾಗಿ ಶ್ರಮಿಸಿದ್ದಾರೆ ಹಾಗೂ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದಾರೆ. ಕೋವಿಡ್ ಹಾವಳಿಯ ಸಮಯದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸದಂತೆ ನಿರ್ಬಂಧಿಸಲ್ಪಟ್ಟ ಕ್ರೈಸ್ತ ಸಮದಾಯದ ಪರವಾಗಿ ಅವರು ಕಾನೂನುಹೋರಾಟ ನಡೆಸಿದ್ದಾರೆ ಹಾಗೂ ತಮ್ಮ ನೌಕರರ ವಿರುದ್ಧ ತಾರತಮ್ಯ ನಡೆಸುವ ಕಾರ್ಪೊರೇಟ್ ಕಂಪೆನಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದು’’ ಎಂದು ಟ್ರಂಪ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೂತನ ಡಿಓಜೆ ಆಗಿ ಹರ್‌ಮೀತ್ ಅವರು ಅಮೆರಿಕದ ಸಾಂವಿಧಾನಿಕ ಹಕ್ಕುಳ ಪ್ರತಿಪಾದಕಿಯಾಗಿ ನಿರಂತರವಾಗಿ ಶ್ರಮಿಸಲಿದ್ದಾರೆ ಹಾಗೂ ನಮ್ಮ ಮಾನವಹಕ್ಕುಗಳನ್ನು ಅನುಷ್ಠಾನಗೊಳಿಸಲಿದ್ದಾರೆ ಹಾಗೂ ಚುನಾವಣಾ ಕಾನೂನುಗಳು ನ್ಯಾಯಸಮ್ಮತ ಹಾಗೂ ದೃಢವಾಗಿರುವಂತೆ ನೋಡಿಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವರ್ಷದ ಜುಲೈನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಸಿಖ್ಖರ ಅರ್ದಾಸ್ ಪ್ರಾರ್ಥನೆಯನ್ನು ಪಠಿಸಿದ್ದಕಾಗಿ ದಿಲ್ಲೋನ್ ಜನಾಂಗೀಯ ನಿಂದನೆಗೆ ಗುರಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News