×
Ad

ಎಲಾನ್ ಮಸ್ಕ್ ಎಕ್ಸ್‌ ಅನ್ನು ಖರೀದಿಸಿದ ಬಳಿಕ ಕನಿಷ್ಠ ಎಂಟು ತಿಂಗಳು ದ್ವೇಷ ಭಾಷಣಗಳು ಉಲ್ಬಣಗೊಂಡಿದ್ದವು: ನೂತನ ಅಧ್ಯಯನ

Update: 2025-02-24 16:27 IST

ಎಲಾನ್ ಮಸ್ಕ್ (Photo: PTI)

ಹೊಸದಿಲ್ಲಿ: ಟೆಕ್ ಬಿಲಿಯಾಧೀಶ ಎಲಾನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ ಅನ್ನು ಖರೀದಿಸಿದ ಬಳಿಕ ಕನಿಷ್ಠ ಎಂಟು ತಿಂಗಳುಗಳ ಕಾಲ ದ್ವೇಷ ಭಾಷಣಗಳು ನಿರಂತರವಾಗಿ ಶೇ.50ರಷ್ಟು ಹೆಚ್ಚಾಗಿದ್ದವು ಎಂದು ನೂತನ ಅಧ್ಯಯನವೊಂದು ಹೇಳಿದೆ.

ಜನಾಂಗೀಯ ಹಾಗೂ ಸಲಿಂಗಕಾಮಿ ಮತ್ತು ತೃತೀಯಲಿಂಗಿಗಳ ವಿರುದ್ಧ ದ್ವೇಷ ಸೇರಿದಂತೆ ವ್ಯಾಪಕ ಶ್ರೇಣಿಯಲ್ಲಿ ಬಹಿರಂಗ ದ್ವೇಷ ಭಾಷಣಗಳ ಹರಡುವಿಕೆಯನ್ನು ಅಧ್ಯಯನವು ಗಮನಿಸಿದೆ.

ಅಧ್ಯಯನ ವರದಿಯು PLOS ONE ನಲ್ಲಿ ಪ್ರಕಟಗೊಂಡಿದ್ದು,ಬರ್ಕಲಿಯ ಕ್ಯಾಲಿಫೋರ್ನಿಯಾ ವಿವಿಯ ಡೇನಿಯಲ್ ಹಿಕ್ನೆ ನೇತೃತ್ವದ ಸಂಶೋಧಕರ ತಂಡವು ಈ ಅಧ್ಯಯನವನ್ನು ಕೈಗೊಂಡಿತ್ತು.

ಸ್ನೇಹಿತರ ಮತ್ತು ಕುಟುಂಬ ಸದಸ್ಯರ ಪರಸ್ಪರ ಸಂಪರ್ಕಕ್ಕೆ ನೇರವಾಗುವ ಆರಂಭಿಕ ಉದ್ದೇಶದೊಂದಿಗೆ ಆವಿಷ್ಕಾರಗೊಂಡಿದ್ದ ವೇದಿಕೆಯು ಈಗ ದ್ವೇಷಭಾಷಣಗಳು ಹುಲುಸಾಗಿರುವ ತಾಣವಾಗಿ ಹೇಗೆ ರೂಪಾಂತರಗೊಂಡಿದೆ ಎನ್ನುವುದನ್ನು ಅಧ್ಯಯನವು ಸ್ಪಷ್ಟವಾಗಿ ತೋರಿಸಿದೆ. ಆನ್‌ಲೈನ್‌ನಲ್ಲಿಯ ದ್ವೇಷ ಭಾಷಣಗಳು ಆಫ್‌ಲೈನ್‌ನಲ್ಲಿಯ ಹಿಂಸಾತ್ಮಕ ದ್ವೇಷಾಪರಾಧಗಳಿಗೆ ಸಂಬಂಧಿಸಿರುವುದರಿಂದ ಇದು ವಿಶೇಷ ಕಳವಳಕಾರಿಯಾಗಿದೆ.

2022,ಅ.27ರಂದು ಆಗ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಎಕ್ಸ್‌ನ್ನು 44 ಶತಕೋಟಿ ಡಾಲರ್ ಗಳಿಗೆ ಖರೀದಿಸಿದ ಮಸ್ಕ್ ಅದರ ಸಿಇಒ ಆದರು. ವೇದಿಕೆಯಲ್ಲಿ ದ್ವೇಷ ಭಾಷಣಗಳನ್ನು ಕಡಿಮೆ ಮಾಡುವ,‌ ಬಾಟ್‌ಗಳು ಮತ್ತು ಇತರ ಅನಧಿಕೃತ ಖಾತೆಗಳಿಗೆ ಕಡಿವಾಣ ಹಾಕುವ ಭರವಸೆಗಳನ್ನು ಮಸ್ಕ್ ನೀಡಿದ್ದರು.

ಆದರೆ ಎಕ್ಸ್‌ ಅನ್ನು ಖರೀದಿಸಿದ ಬಳಿಕ ಮಸ್ಕ್ ಕಂಟೆಂಟ್ ಮಾಡರೇಷನ್ ಅಥವಾ ವಿಷಯ ಮಿತಿಯನ್ನು ಸಡಲಿಸಲು ವೇದಿಕೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದರು. ಉದಾಹರಣೆಗೆ ನವಂಬರ್ 2022ರಲ್ಲಿ ಅವರು ಕಂಪನಿಯ ಹೆಚ್ಚಿನ ಪೂರ್ಣಾವಧಿಯ ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಹೆಚ್ಚಿನ ಮಟ್ಟದ ಕಂಟೆಂಟ್ ಮಾಡರೇಷನ್ ಹೊಂದಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಕಡಿಮೆ ದ್ವೇಷ ಭಾಷಣಗಳನ್ನು ಒಳಗೊಂಡಿರುತ್ತವೆ ಎಂದು ಸಂಶೋಧನೆ ತೋರಿಸಿದ್ದರೂ ಎಕ್ಸ್‌ನ ದುರುಪಯೋಗವನ್ನು ಪತ್ತೆ ಹಚ್ಚುತ್ತಿದ್ದ ಹೊರಗುತ್ತಿಗೆ ಆಧಾರದ ಕಂಟೆಂಟ್ ಮಾಡರೇಟರ್‌ಗಳನ್ನೂ ಅವರು ತೆಗೆದುಹಾಕಿದ್ದರು.

ಮುಂದಿನ ತಿಂಗಳು ಎಕ್ಸ್‌ನಲ್ಲಿ ದ್ವೇಷ ಭಾಷಣ ಮತ್ತು ಇತರ ಸಮಸ್ಯೆಗಳ ವಿರುದ್ಧ ಹೋರಾಡಲು 2016ರಲ್ಲಿ ರಚಿಸಲಾಗಿದ್ದ ಸ್ವತಂತ್ರ ಮಾನವ ಹಕ್ಕುಗಳ ನಾಯಕರು ಮತ್ತು ಶಿಕ್ಷಣ ತಜ್ಞರ ಸ್ವಯಂಸೇವಾ ಸಲಹಾ ಗುಂಪು ಆಗಿದ್ದ ವೇದಿಕೆಯ ಟ್ರಸ್ಟ್ ಆ್ಯಂಡ್ ಸೇಫ್ಟಿ ಕೌನ್ಸಿಲ್‌ನ್ನು ಅವರು ವಿಸರ್ಜಿಸಿದ್ದರು.

ಮಸ್ಕ್ ಎಕ್ಸ್‌ ಅನ್ನು ವಶಪಡಿಕೊಂಡ ಕೂಡಲೇ ಅದರಲ್ಲಿ ದ್ವೇಷ ಭಾಷಣಗಳು ಹೆಚ್ಚಾಗಿದ್ದವು ಎನ್ನುವುದನ್ನು ಹಿಂದಿನ ಸಂಶೋಧನೆಯು ತೋರಿಸಿದೆ, ಹಾಗೆಯೇ ಹೆಚ್ಚಿನ ಬಾಟ್‌ಗಳ ಹರಡುವಿಕೆಯೂ ಯಥಾಸ್ಥಿತಿಯಲ್ಲಿತ್ತು.

ನೂತನ ಅಧ್ಯಯನವು ಇದು ಅಸಂಗತೆಯಲ್ಲ ಎಂದು ತೋರಿಸಿರುವ ಮೊದಲ ಅಧ್ಯಯನವಾಗಿದೆ.

ಅಧ್ಯಯನವು 2022ರ ಆರಂಭದಿಂದ 2023,ಜೂ.9ರವರೆಗಿನ 47 ಲಕ್ಷ ಇಂಗ್ಲಿಷ್ ಭಾಷೆಯಲ್ಲಿನ ಪೋಸ್ಟ್‌ಗಳನ್ನು ಪರಿಶೀಲಿಸಿದೆ. ಈ ಅವಧಿಯು ಮಸ್ಕ್ ಖರೀದಿಗೆ ಮೊದಲಿನ 10 ತಿಂಗಳುಗಳು ಮತ್ತು ನಂತರದ ಎಂಟು ತಿಂಗಳುಗಳನ್ನು ಒಳಗೊಂಡಿದೆ. ಮಸ್ಕ್ ಎಕ್ಸ್‌ನ್ನು ಖರೀದಿಸಿದ ಬಳಿಕ ದ್ವೇಷ ಭಾಷಣಗಳನ್ನು ಹೊಂದಿರುವ ಪೋಸ್ಟ್‌ಗಳ ಸರಾಸರಿ ಸಂಖ್ಯೆಯಲ್ಲಿ ಸ್ಪಷ್ಟ ಹೆಚ್ಚಳವನ್ನು ಅಧ್ಯಯನವು ಕಂಡುಕೊಂಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಎಕ್ಸ್‌ನ್ನು ಮಸ್ಕ್ ಖರೀದಿ ಮಾಡಿದ ಮೊದಲಿನ ಅವಧಿಗೆ ಹೋಲಿಸಿದರೆ ನಂತರದ ಎಂಟು ತಿಂಗಳುಗಳಲ್ಲಿ ದ್ವೇಷ ಭಾಷಣಗಳ ಪ್ರಮಾಣದಲ್ಲಿ ಸ್ಥಿರವಾಗಿ ಶೆ.50ರಷ್ಟು ಏರಿಕೆಯಾಗಿತ್ತು. ದ್ವೇಷಭಾಷಣಗಳನ್ನು ಒಳಗೊಂಡ ಪೋಸ್ಟ್‌ಗಳ ಸಂಖ್ಯೆ ವಾರಕ್ಕೆ ಅಂದಾಜು ಸರಾಸರಿ 2,179ರಿಂದ 3,246ಕ್ಕೆ ಜಿಗಿದಿತ್ತು.

ಮಸ್ಕ್ ಮೇಲ್ವಿಚಾರಣೆಯಲ್ಲಿ ಬಳಕೆದಾರರು ದ್ವೇಷ ಭಾಷಣಗಳನ್ನು ಪೋಸ್ಟ್ ಮಾಡುವುದೂ ಹೆಚ್ಚಾಗಿದೆ. ದ್ವೇಷ ಭಾಷಣಗಳನ್ನು ಇಷ್ಟಪಡುವ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಅಧ್ಯಯನವು ಹೇಳಿದೆ.

ದ್ವೇಷ ಭಾಷಣಗಳನ್ನು ತೆಗೆದುಹಾಕಲಾಗಿರಲಿಲ್ಲ,ದ್ವೇಷಪೂರಿತ ಬಳಕೆದಾರರು ಹೆಚ್ಚು ಸಕ್ರಿಯರಾಗಿದ್ದರು. ವೇದಿಕೆಯ ಅಲ್ಗಾರಿದಮ್ ಅನುದ್ದಿಷ್ಟವಾಗಿ ಕಂಟೆಂಟ್‌ನ್ನು ಇಷ್ಟಪಡುವ ಬಳಕೆದಾರರಿಗಾಗಿ ದ್ವೇಷ ಭಾಷಣವನ್ನು ಉತ್ತೇಜಿಸಿತ್ತು ಅಥವಾ ಈ ಸಂಭವನೀಯತೆಗಳ ಸಂಯೋಜನೆಯನ್ನು ಈ ಫಲಿತಾಂಶಗಳು ಸೂಚಿಸಿವೆ ಎಂದು ಅಧ್ಯಯನ ವರದಿಯು ಹೇಳಿದೆ.

ಕೃಪೆ: theconversation.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News