ತೆರವು ಕಾರ್ಯಾಚರಣೆ: ಹಿಮಂತ ಬಿಸ್ವ ಶರ್ಮ ಹಾಗೂ ಮದನಿ ನಡುವೆ ಜಟಾಪಟಿ
ಯಾರು ಮದನಿ ಎಂದು ಪ್ರಶ್ನಿಸಿದ ಅಸ್ಸಾಂ ಮುಖ್ಯಮಂತ್ರಿ
ಹಿಮಂತ ಬಿಸ್ವ ಶರ್ಮ | PC : PTI
ಗುವಾಹಟಿ: ಇತ್ತೀಚೆಗೆ ನಡೆದ ತೆರವು ಕಾರ್ಯಾಚರಣೆಯ ಸ್ಥಳಕ್ಕೆ ಜಮಾಯತ್ ಉಲೇಮಾ-ಐ-ಹಿಂದ್ ನ ಅಧ್ಯಕ್ಷ ಮಹ್ಮೂದ್ ಮದನಿ ಬೇಟಿ ನೀಡಿದ ನಂತರ, ಮಂಗಳವಾರ ಅವರ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿಮಂತ ಬಿಸ್ವ ಶರ್ಮ, ಮದನಿಯ ಪ್ರಸ್ತುತೆಯನ್ನು ಪ್ರಶ್ನಿಸಿದರಲ್ಲದೆ, ಅವರಿಗೆ ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಪ್ರಾಮುಖ್ಯತೆ ಇತ್ತು ಎಂದು ವ್ಯಂಗ್ಯವಾಡಿದರು.
“ಯಾರು ಮದನಿ? ಅವರೇನು ದೇವರೆ? ಅವರ ಶೂರತ್ವವೇನಿದ್ದರೂ ಕಾಂಗ್ರೆಸ್ ಆಡಳಿತದಲ್ಲಿ ಮಾತ್ರವೇ ಹೊರತು ಬಿಜೆಪಿ ಆಡಳಿತದಲ್ಲಲ್ಲ. ಅವರೇನಾದರೂ ತಮ್ಮ ಮಿತಿಯನ್ನು ಮೀರಿದರೆ, ಅವರನ್ನು ಜೈಲಿಗೆ ಹಾಕುತ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದು, ಮದನಿ ಅಲ್ಲ. ನನಗೆ ಮದನಿಯ ಭಯವಿಲ್ಲ” ಎಂದು ಗುಡುಗಿದರು.
ಇದಕ್ಕೂ ಮುನ್ನ, ತಮ್ಮನ್ನು ಬಂಧಿಸಿ, ಬಾಂಗ್ಲಾದೇಶಕ್ಕೆ ರವಾನಿಸಲಾಗುವುದು ಎಂಬ ಹಿಮಂತ ಬಿಸ್ವ ಶರ್ಮರ ಹೇಳಿಕೆಯ ಕುರಿತು ಬೆಳಗ್ಗೆ ಪ್ರತಿಕ್ರಿಯಿಸಿದ ಜಮಾಯತ್ ನಾಯಕ ಮದನಿ, “ನಾನು ನಿನ್ನೆಯಿಂದ ರಾಜ್ಯದಲ್ಲಿದ್ದೇನೆ. ಎಲ್ಲ ಮುಸ್ಲಿಮರನ್ನೂ ಬಾಂಗ್ಲಾದೇಶಕ್ಕೆ ಕಳಿಸಬೇಕು ಎಂದು ಹಿಮಂತ ಬಿಸ್ವ ಶರ್ಮ ಹೇಳುತ್ತಿದ್ದಾರೆ. ಹೀಗಾಗಿ, ಯಾರು ಈ ದೇಶದಲ್ಲಿ ದ್ವೇಷವನ್ನು ಹರಡುತ್ತಿದ್ದಾರೊ, ಅಂಥವರನ್ನು ಪಾಕಿಸ್ತಾನಕ್ಕೆ ಕಳಿಸಬೇಕು” ಎಂದು ತಿರುಗೇಟು ನೀಡಿದರು.
ಗೋಲ್ಪಾರಾ ಜಿಲ್ಲೆಯ ತೆರವು ಸ್ಥಳಗಳಿಗೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮದನಿ, “ಸುಪ್ರೀಂ ಕೋರ್ಟ್ ನಿಗದಿಗೊಳಿಸಿರುವ ನಿಯಮಗಳನುಸಾರ ಅಸ್ಸಾಂ ಸರಕಾರ ತೆರವು ಕಾರ್ಯಾಚರಣೆಯನ್ನು ನಡೆಸಬೇಕು” ಎಂದು ಆಗ್ರಹಿಸಿದರು.
“ಯಾವಾಗೆಲ್ಲ ತೆರವು ಕಾರ್ಯಾಚರಣೆ ನಡೆಯುತ್ತದೊ, ಆಗೆಲ್ಲ ಪುನರ್ವಸತಿ ಯೋಜನೆ ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಹೇಳಿದೆ. ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾಗಿರುವ ಜನರಿಗೆ ಪುನರ್ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ನಾವು ಅಸ್ಸಾಂ ಸರಕಾರವನ್ನು ಆಗ್ರಹಿಸುತ್ತೇವೆ” ಎಂದು ಅವರು ಒತ್ತಾಯಿಸಿದರು.
ರಸ್ತೆ ಅಗಲೀಕರಣದಂತಹ ವಿವಿಧ ಕಾಮಗಾರಿಗಳನ್ನು ಮಾಡಲು ಸರಕಾರ ತೆರವು ಕಾರ್ಯಾಚರಣೆಯನ್ನು ನಡೆಸಬೇಕಾಗುತ್ತದೆ. ಆದರೆ, ಇದನ್ನು ವ್ಯವಸ್ಥೆಯ ಚೌಕಟ್ಟಿನೊಳಗೆ ಹಾಗೂ ಮಾನವೀಯ ಧೋರಣೆಯೊಂದಿಗೆ ನಿರ್ವಹಿಸಬೇಕು ಎಂದು ಅವರು ಮನವಿ ಮಾಡಿದರು.