×
Ad

‘ತಾನು ಶುದ್ಧ ರಕ್ತದ ಅಭ್ಯರ್ಥಿ’ ಎಂದು ಘೋಷಿಸಿಕೊಂಡು ಅಮೆರಿಕ ಅಧ್ಯಕ್ಷೀಯ ಹುದ್ದೆಯ ಸ್ಪರ್ಧೆಗಿಳಿದ ಭಾರತೀಯ ಮೂಲದ ಇಂಜಿನಿಯರ್

Update: 2023-07-30 14:29 IST

ಹಿರ್ಶ್ ವರ್ಧನ್ ಸಿಂಗ್ (Twitter/@HirshSingh)

ವಾಷಿಂಗ್ಟನ್: "ನಾನು ಕೋವಿಡ್ ಲಸಿಕೆ ಪಡೆಯದ ಕಾರಣ ಶುದ್ಧ ರಕ್ತದ ಅಭ್ಯರ್ಥಿ" ಎಂದು ಘೋಷಿಸಿಕೊಂಡಿರುವ ಭಾರತೀಯ ಮೂಲದ ಇಂಜಿನಿಯರ್ ಹಿರ್ಶ್ ವರ್ಧನ್ ಸಿಂಗ್, ಶ್ವೇತ ಭವನದ ಮುಖ್ಯಸ್ಥರಾಗಲು ತಮ್ಮ ಅಭ್ಯರ್ಥಿತನವನ್ನು ಪ್ರಕಟಿಸಿದ್ದು, 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಕಿಕ್ಕಿರಿದು ತುಂಬಿರುವ ರಿಪಬ್ಲಿಕನ್ ಪಕ್ಷದ ಗುಂಪಿನಲ್ಲಿ ನಿಕ್ಕಿ ಹ್ಯಾಲೆ ಹಾಗೂ ವಿವೇಕ್ ರಂಗಸ್ವಾಮಿ ನಂತರ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಹವಣಿಸುತ್ತಿರುವ ಮೂರನೆಯ ಭಾರತೀಯರಾಗಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಟ್ವಿಟರ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ 38ರ ಪ್ರಾಯದ ಹರೀಶ್ ವರ್ಧನ್ ಸಿಂಗ್, "ನಾನು ಆಜೀವಪರ್ಯಂತ ರಿಪಬ್ಲಿಕನ್ ಆಗಿದ್ದೇನೆ ಮತ್ತು ನ್ಯೂಜೆರ್ಸಿ ರಿಪಬ್ಲಿಕನ್ ಪಕ್ಷದ ಸಂಪ್ರದಾಯವಾದಿ ಘಟಕವನ್ನು ಮರುಸ್ಥಾಪಿಸಲು ದುಡಿದ 'ಅಮೆರಿಕಾ ಮೊದಲು' ಅಭಿಯಾನದ ಸಂಪ್ರದಾಯವಾದಿಯಾಗಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.

"ಕಳೆದ ಕೆಲವು ವರ್ಷಗಳಿಂದ ಆಗಿರುವ ಬದಲಾವಣೆಗಳನ್ನು ಬದಲಿಸಲು ಹಾಗೂ ಅಮೆರಿಕಾದ ಮೌಲ್ಯಗಳನ್ನು ಮರುಸ್ಥಾಪಿಸಲು ನಮಗೆ ಶಕ್ತಿಶಾಲಿ ನಾಯಕತ್ವದ ಅಗತ್ಯವಿದೆ. ಹೀಗಾಗಿಯೇ ನಾನು 2024ರ ಅಮೆರಿಕಾದ ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧಿಸಲು ರಿಪಬ್ಲಿಕನ್ ಪಕ್ಷದಿಂದ ನಾಮಕರಣ ಹೊಂದಲು ನಿರ್ಧರಿಸಿದ್ದೇನೆ" ಎಂದು ಶುಕ್ರವಾರ ತಮ್ಮ ಮೂರು ನಿಮಿಷಗಳ ವಿಡಿಯೊದಲ್ಲಿ ವರ್ಧನ್ ಸಿಂಗ್ ತಿಳಿಸಿದ್ದಾರೆ.

ಅವರು ಗುರುವಾರ ತಮ್ಮ ಅಭ್ಯರ್ಥಿತನವನ್ನು ಫೆಡರಲ್ ಎಲೆಕ್ಷನ್ ಕಮಿಷನ್‌ ಎದುರು ಅಧಿಕೃತವಾಗಿ ಸಲ್ಲಿಸಿದ್ದಾರೆ ಎಂದು The Hill Newspaper ವರದಿ ಮಾಡಿದೆ.

ಇದಕ್ಕೂ ಮುನ್ನ, ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಹುದ್ದೆಗೆ ದಕ್ಷಿಣ ಕರೋಲಿನಾದ ಮಾಜಿ ರಾಜ್ಯಪಾಲೆ ನಿಕ್ಕಿ ಹ್ಯಾಲೆ (51) ಹಾಗೂ ಕೋಟ್ಯಧಿಪತಿ ಉದ್ಯಮಿ ವಿವೇಕ್ ರಾಮಸ್ವಾಮಿ (37) ರಿಪಬ್ಲಿಕನ್ ಪಕ್ಷದ ಪರವಾಗಿ ತಮ್ಮ ಅಭ್ಯರ್ಥಿತನವನ್ನು ಘೋಷಿಸಿದ್ದರು.

ಕಾನೂನು ಸವಾಲುಗಳನ್ನು ಎದುರಿಸುತ್ತಿದ್ದರೂ 2024ರ ರಿಪಬ್ಲಿಕನ್ ಪಕ್ಷದ ನಾಮಕರಣದ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಅವರೆಲ್ಲ ಸ್ಪರ್ಧಿಸಲಿದ್ದಾರೆ.

ಜುಲೈ 15-18, 2024ರವರೆಗೆ ರಿಪಬ್ಲಿಕನ್ ಪಕ್ಷದ ಸದಸ್ಯರು ವಿಸ್ಕಾನ್ಸಿನ್‌ನ ಮಿಲ್ವಾವ್ಕೀಯಲ್ಲಿ ಆಯೋಜನೆಗೊಂಡಿರುವ ರಾಷ್ಟ್ರೀಯ ಸಮ್ಮೇಳನದಲ್ಲಿ ಸಭೆ ಸೇರಲಿದ್ದು, ತಮ್ಮ ಪಕ್ಷದ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿಯನ್ನು ಔಪಚಾರಿಕವಾಗಿ ನಾಮಕರಣ ಮಾಡಲಿದ್ದಾರೆ.

ಹಿರ್ಶ್ ವರ್ಧನ್ ಸಿಂಗ್ ಇದಕ್ಕೂ ಮುನ್ನ 2017 ಹಾಗೂ 2021ರಲ್ಲಿ ನ್ಯೂಜೆರ್ಸಿ ರಾಜ್ಯಪಾಲರ ಹುದ್ದೆಗೆ ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಅಭ್ಯರ್ಥಿಯಾಗಲು ಸ್ಪರ್ಧಿಸಿದ್ದರು. ಇದಲ್ಲದೆ 2018ರಲ್ಲಿ ಶ್ವೇತಭವನದ ಸದಸ್ಯರಾಗಲು ಹಾಗೂ 2020ರಲ್ಲಿ ಸೆನೆಟ್ ಸದಸ್ಯರಾಗಲು ಪ್ರಯತ್ನಿಸಿದ್ದರಾದರೂ, ಅವರು ತಮ್ಮ ಆ ಪ್ರಯತ್ನಗಳಲ್ಲಿ ವಿಫಲರಾಗಿದ್ದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News