×
Ad

ಅಮೆರಿಕದ ಸಮರನೌಕೆಗಳ ಮೇಲೆ ಹೌದಿಗಳ ಪ್ರತಿದಾಳಿ

Update: 2025-03-17 23:47 IST

Photo: NDTV

ಸನಾ: ಅಮೆರಿಕದ ಮಾರಣಾಂತಿಕ ದಾಳಿಗೆ ಪ್ರತಿಯಾಗಿ ಅಮೆರಿಕದ ಸಮರ ನೌಕೆಗಳ ಮೇಲೆ ಎರಡು ಬಾರಿ ದಾಳಿ ನಡೆಸಿರುವುದಾಗಿ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಸೋಮವಾರ ಹೇಳಿದ್ದಾರೆ.

ಕೆಂಪು ಸಮುದ್ರದಲ್ಲಿ ಅಮೆರಿಕದ ವಿಮಾನವಾಹಕ ಸಮರನೌಕೆ `ಯುಎಸ್‍ಎಸ್ ಹ್ಯಾರಿ ಟ್ರೂಮನ್' ಮೇಲೆ 18 ಕ್ಷಿಪಣಿಗಳು ಹಾಗೂ ಡ್ರೋನ್‍ಗಳನ್ನು ಪ್ರಯೋಗಿಸಲಾಗಿದೆ. ಕೆಲ ಗಂಟೆಗಳ ಬಳಿಕ ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ನಡೆಸಲಾಗಿದೆ. ನಮ್ಮ ದೇಶದ ವಿರುದ್ಧದ ಅಮೆರಿಕದ ಆಕ್ರಮಣಕ್ಕೆ ಪ್ರತಿಯಾಗಿ ದಾಳಿ ನಡೆಸಿರುವುದಾಗಿ ಹೌದಿಗಳ ವಕ್ತಾರರು ಪ್ರತಿಪಾದಿಸಿದ್ದಾರೆ.

ಕೆಂಪು ಸಮುದ್ರದಲ್ಲಿ ಸಾಗುವ ನೌಕೆಗಳ ಮೇಲೆ ದಾಳಿ ನಡೆಸುವುದನ್ನು ನಿಲ್ಲಿಸುವ ತನಕ ಹೌದಿಗಳ ವಿರುದ್ಧ ವೈಮಾನಿಕ ದಾಳಿ ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಘೋಷಿಸಿದ್ದರು. ಶನಿವಾರ ಅಮೆರಿಕ ನಡೆಸಿದ್ದ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 53 ಮಂದಿ ಸಾವನ್ನಪ್ಪಿದ್ದು 98 ಮಂದಿ ಗಾಯಗೊಂಡಿರುವುದಾಗಿ ಹೌದಿ ಆರೋಗ್ಯ ಇಲಾಖೆ ಹೇಳಿದೆ.

ಯೆಮನ್‍ ನ ಪಶ್ಚಿಮ ಪ್ರಾಂತದಲ್ಲಿರುವ ಹೊದೈದಾ ಬಂದರನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದ್ದು ರವಿವಾರ ರಾತ್ರಿಯೂ ಹಲವು ಸ್ಫೋಟಗಳ ಸದ್ದು ಕೇಳಿಬಂದಿದೆ ಎಂದು ವರದಿಯಾಗಿದೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯ ಪ್ರದೇಶದಲ್ಲಿ ಪರಿಸ್ಥಿತಿ ಮತ್ತೆ ಉಲ್ಬಣಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ಎರಡೂ ಕಡೆಯವರು ಎಲ್ಲಾ ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆಗ್ರಹಿಸಿದೆ.

ಅರೆಬಿಯನ್ ಪರ್ಯಾಯ ದ್ವೀಪದ ಬಡದೇಶ ಯೆಮನ್‍ ನ ಹೆಚ್ಚಿನ ಭಾಗವನ್ನು ನಿಯಂತ್ರಿಸುತ್ತಿರುವ ಇರಾನ್ ಬೆಂಬಲಿತ ಹೌದಿಗಳು ಗಾಝಾ ಯುದ್ಧದ ಸಂದರ್ಭ, ಕೆಂಪು ಸಮುದ್ರ ಮಾರ್ಗವಾಗಿ ಸಾಗುವ ನೌಕೆಗಳ ಮೇಲೆ ದಾಳಿ ನಡೆಸಿದ್ದು, ಫೆಲೆಸ್ತೀನೀಯರನ್ನು ಬೆಂಬಲಿಸಿ ಹೀಗೆ ಮಾಡುತ್ತಿರುವುದಾಗಿ ತಮ್ಮ ಕಾರ್ಯಗಳನ್ನು ಸಮರ್ಥಿಸಿಕೊಂಡಿದ್ದರು. ಜನವರಿ 19ರಂದು ಗಾಝಾ ಕದನ ವಿರಾಮ ಒಪ್ಪಂದ ಜಾರಿಗೊಂಡ ಬಳಿಕ ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಹೌದಿಗಳ ದಾಳಿ ನಡೆದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News