ಜೆರುಸಲೆಮ್ ಬಳಿ ಭೀಕರ ಕಾಡ್ಗಿಚ್ಚು ; ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆ ರದ್ದು
Photo : Times of Isreal
ಜೆರುಸಲೆಮ್: ಬುಧವಾರ ಜೆರುಸಲೆಮ್ ಬಳಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಹೆದ್ದಾರಿಗಳ ಮೇಲೆ ದಟ್ಟವಾದ ಹೊಗೆಯ ಆವರಿಸಿಕೊಂಡಿದೆ. ಕಾಡ್ಗಿಚ್ಚನ್ನು ನಿಯಂತ್ರಿಸಲು ಅಗ್ನಿಶಾಮಕ ದಳಗಳು ಹರಸಾಹಸ ಪಡುತ್ತಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಾಡ್ಗಿಚ್ಚಿನಿಂದ ಹಲವರಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಪರಿಸ್ಥಿತಿಯನ್ನು "ರಾಷ್ಟ್ರೀಯ ತುರ್ತುಸ್ಥಿತಿ" ಎಂದು ಘೋಷಿಸಿದ್ದಾರೆ. ಕಾಡ್ಗಿಚ್ಚಿನ ಪರಿಣಾಮವಾಗಿ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯನ್ನು ರದ್ದುಗೊಳಿಸಿದ್ದು, ರೆಕಾರ್ಡ್ ಮಾಡಿದ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುವುದು ಎಂದು ತಿಳಿದು ಬಂದಿದೆ.
ಗಾಯಗೊಂಡಿರುವ ಸುಮಾರು 23 ಜನರಿಗೆ ಚಿಕಿತ್ಸೆ ನೀಡಿರುವುದಾಗಿ ಎಂಡಿಎ ಹೇಳಿದೆ. ಗಾಯಾಳುಗಳಲ್ಲಿ ಇಬ್ಬರು ಗರ್ಭಿಣಿಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.
"ನಾವು ರಾಷ್ಟ್ರೀಯ ತುರ್ತುಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಜೀವಗಳನ್ನು ಉಳಿಸಲು ಮತ್ತು ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಂಪನ್ಮೂಲಗಳನ್ನು ಸಜ್ಜುಗೊಳಿಸುತ್ತಿದ್ದೇವೆ", ಎಂದು ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಜ್ ತಮ್ಮ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಾರದ ಹಿಂದೆ ಬೆಂಕಿಯಿಂದ ನಾಶವಾದ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡ ಕಾರಣ ಪೊಲೀಸರು ಜೆರುಸಲೆಮ್- ಟೆಲ್ ಅವಿವ್ ನ ಮುಖ್ಯ ಹೆದ್ದಾರಿಯನ್ನು ಮುಚ್ಚಿ, ನಿವಾಸಿಗಳನ್ನು ಸ್ಥಳಾಂತರಿಸಿದ್ದಾರೆ. ಸಾವಿರಾರು ಜನರು ವಾಸಿಸುವ ಪ್ರದೇಶವನ್ನು ಈಗಾಗಲೇ ರಕ್ಷಣಾ ಕಾರ್ಯಚಾರಣೆಯ ಭಾಗವಾಗಿ ತೆರವುಗೊಳಿಸಲಾಗಿದೆ.
ದಶಕದಲ್ಲೇ ಸಂಭವಿಸಿದ ಅತೀ ಭೀಕರ ಅಗ್ನಿ ದುರಂತ ಇದಾಗಿದೆ ಎನ್ನಲಾಗಿದೆ. ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್ ಬಳಕೆಯನ್ನೂ ಮಾಡಲಾಗಿದೆ. ಕಾಡ್ಗಿಚ್ಚಿನ ಪ್ರದೇಶವನ್ನು ಆವರಿಸಿಕೊಂಡಿರುವ ವಸತಿ ಸಮುಚ್ಛಯಗಳ ಬಳಿ ಆಂಬ್ಯುಲೆನ್ಸ್ ಗಳನ್ನೂ ಇರಿಸಲಾಗಿದೆ ಎಂದು MDA ತಿಳಿಸಿದೆ. ಇಸ್ರೇಲ್ ವಿದೇಶಾಂಗ ಸಚಿವಾಲಯವು ಗ್ರೀಸ್, ಸೈಪ್ರಸ್, ಕ್ರೊಯೇಷಿಯಾ, ಇಟಲಿ ಮತ್ತು ಬಲ್ಗೇರಿಯಾ ಸೇರಿದಂತೆ ಹತ್ತಿರದ ದೇಶಗಳನ್ನು ಸಹಾಯಕ್ಕಾಗಿ ಸಂಪರ್ಕಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಇಟಲಿ ಮತ್ತು ಕ್ರೊಯೇಷಿಯಾದಿಂದ ಮೂರು ವಿಮಾನಗಳು ಶೀಘ್ರದಲ್ಲೇ ಬರಲಿವೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.