×
Ad

ಭಾರತ, ಪಾಕಿಸ್ತಾನಗಳಲ್ಲಿ ಮಾನವ ಹಕ್ಕು ಉಲ್ಲಂಘನೆ: ಅಮೆರಿಕ

Update: 2025-08-14 08:44 IST

PC: x.com/MarioNawfal

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನಗಳಲ್ಲಿ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆಯಾಗುತ್ತಿದೆ ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಭಾರತ "ಕನಿಷ್ಠ ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಂಡಿದೆ" ಮತ್ತು ಪಾಕಿಸ್ತಾನ "ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಂಡಿರುವುದು ಅಪರೂಪ" ಎಂದು ಮಂಗಳವಾರ ಬಿಡುಗಡೆ ಮಾಡಿರುವ ಮಾನವ ಹಕ್ಕುಗಳ ಕಿರು ವರದಿ ಅಭಿಪ್ರಾಯಪಟ್ಟಿದೆ.

ಟ್ರಂಪ್ ಆಡಳಿತ ವಿಶ್ವವ್ಯಾಪಿ ಮಾನವ ಹಕ್ಕುಗಳ ವರದಿಯನ್ನು ಕಿರಿದುಗೊಳಿಸಲು ಕ್ರಮ ಕೈಗೊಂಡಿದ್ದು, ವಿಚಿತ್ರವೆಂದರೆ ಟ್ರಂಪ್ ಅವರ ಪಾಲುದಾರ ರಾಷ್ಟ್ರಗಳು ಅಂದರೆ ಕೆಲ ಮಿತ್ರದೇಶಗಳ ವಿರುದ್ಧ ಲಘು ಟೀಕೆಗಳನ್ನು ಮಾಡಿದೆ.

ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ಮಾನವ ಹಕ್ಕುಗಳ ದಾಖಲೀಕರಣವನ್ನು ಕೂಡಾ ರಕ್ಷಣಾ ಇಲಾಖೆ ಕಡಿತಗೊಳಿಸಿದೆ. ಟ್ರಂಪ್ ಆಡಳಿತ ಭಾರತದ ಮೇಲೆ ಶೇಕಡ 50ರ ಸುಂಕ ವಿಧಿಸಿದ ಹೊರತಾಗಿಯೂ, ಚೀನಾದ ಅಭಿವೃದ್ಧಿಯನ್ನು ತಡೆಯುವ ನಿಟ್ಟಿನಲ್ಲಿ ಭಾರತವನ್ನು ಪ್ರಮುಖ ಪಾಲುದಾರ ರಾಷ್ಟ್ರ ಎಂದು ಅಮೆರಿಕ ಪರಿಗಣಿಸಿದೆ.

ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದ ಅಧಿಕಾರಿಗಳನ್ನು ಗುರುತಿಸಿ ಶಿಕ್ಷಿಸುವಲ್ಲಿ ಭಾರತ ಕನಿಷ್ಠ ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಂಡಿದೆ ಎಂದು ಭಾರತದ ಬಗ್ಗೆ ಉಲ್ಲೇಖಿಸಿದ್ದರೆ, ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದ ಅಧಿಕಾರಿಗಳನ್ನು ಗುರುತಿಸಿ ಶಿಕ್ಷಿಸುವಲ್ಲಿ ಪಾಕಿಸ್ತಾನ ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಂಡಿರುವುದು ತೀರಾ ಅಪರೂಪ ಎಂದು ಅಭಿಪ್ರಾಯಪಟ್ಟಿದೆ.

ಮಂಗಳವಾರ ಬಿಡುಗಡೆ ಮಾಡಲಾಗಿರುವ ಈ ವರದಿಯ ಬಗ್ಗೆ ವಾಷಿಂಗ್ಟನ್ ನಲ್ಲಿರುವ ಭಾರತ ಅಥವಾ ಪಾಕಿಸ್ತಾನ ರಾಜತಾಂತ್ರಿಕ ಕಚೇರಿಗಳು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2024ರ ನಿದರ್ಶನಗಳನ್ನು ದಾಖಲಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಮತ್ತು ಹ್ಯೂಮನ್ ವಾಚ್ ಸಂಘಟನೆಗಳು ದೋಷವನ್ನು ಗುರುತಿಸಿದ್ದವು. ದ್ವೇಷಭಾಷಣಗಳು ಹೆಚ್ಚುತ್ತಿರುವುದು, ಧರ್ಮ ಆಧರಿತ ಪೌರತ್ವ ಕಾಯ್ದೆ ಮತ್ತು ಮೂಲಭೂತಾತ್ಮಕ ತಾರತಮ್ಯ, ನಂಬಿಕೆಯ ಸ್ವಾತಂತ್ರ್ಯಕ್ಕೆ ಅಪಾಯ ತರುವ ಮತಾಂತರ ವಿರೋಧಿ ಶಾಸನ, ಮುಸ್ಲಿಂ ಬಾಹುಳ್ಯದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದು ಮತ್ತು ಮುಸ್ಲಿಮರು ಹೊಂದಿರುವ ಆಸ್ತಿಗಳ ನಾಶದ ಘಟನೆಗಳನ್ನು ಉಲ್ಲೇಖಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News