×
Ad

ಗಾಝಾದ ಮೂರು ಪ್ರದೇಶಗಳಲ್ಲಿ ಮಾನವೀಯ ಕದನ ವಿರಾಮ ಜಾರಿ

Update: 2025-07-28 21:55 IST

PC | PTI  (ಸಾಂದರ್ಭಿಕ ಚಿತ್ರ)


ಜೆರುಸಲೇಂ, ಜು.28: ಗಾಝಾದ ಮೂರು ಪ್ರದೇಶಗಳಲ್ಲಿ ದಿನಾ 10 ಗಂಟೆ ಮಿಲಿಟರಿ ಚಟುವಟಿಕೆಗೆ ವಿರಾಮ ನೀಡುವ ಮಾನವೀಯ ಕದನ ವಿರಾಮ ಜಾರಿಗೆ ಬಂದಿದ್ದು ಸೋಮವಾರ 120 ಟ್ರಕ್‍ಗಳಲ್ಲಿ ನೆರವು ಸಾಮಾಗ್ರಿ ಗಾಝಾವನ್ನು ಪ್ರವೇಶಿಸಿದೆ ಎಂದು ಇಸ್ರೇಲ್ ಹೇಳಿದೆ.

ಮೊದಲ ದಿನ ವಿಶ್ವಸಂಸ್ಥೆ ಹಾಗೂ ಇತರ ನೆರವು ಏಜೆನ್ಸಿಗಳು 120 ಟ್ರಕ್‍ಲೋಡ್‍ಗಿಂತಲೂ ಅಧಿಕ ಆಹಾರ, ನೆರವನ್ನು ಗಾಝಾ ಪಟ್ಟಿಯಲ್ಲಿ ವಿತರಿಸಿವೆ. ಜೊತೆಗೆ ವಿಮಾನದ ಮೂಲಕ 28 ನೆರವು ಪ್ಯಾಕೇಜ್‍ಗಳನ್ನು ಗಾಝಾಕ್ಕೆ ತಲುಪಿಸಲಾಗಿದೆ. ನೆರವು ವಿತರಣೆಗೆ ಸುರಕ್ಷಿತ ಮಾರ್ಗವನ್ನು ನಿಯೋಜಿಸಲಾಗಿದ್ದು ವಿಶ್ವಸಂಸ್ಥೆ ಹಾಗೂ ಇತರ ಮಾನವೀಯ ಗುಂಪುಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಗಾಝಾದಲ್ಲಿ ಸುಮಾರು 5 ಲಕ್ಷ ಜನರು ಕ್ಷಾಮದಂತಹ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ. ಗಾಝಾದ ಎಲ್ಲಾ ಜನರಿಗೆ ಮೂರು ತಿಂಗಳು ವಿತರಿಸಲು ಸಾಕಾಗುವಷ್ಟು ಆಹಾರ ವಸ್ತುಗಳನ್ನು ಸಂಗ್ರಹಿಸಿಟ್ಟಿರುವುದಾಗಿ ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆ(ಡಬ್ಯ್ಲೂಎಫ್‍ಪಿ)ಯ ನಿರ್ದೇಶಕರು ಹೇಳಿದ್ದಾರೆ.

ಡಬ್ಲ್ಯೂಪಿಎಫ್‍ನ ಸುಮಾರು 80 ಟ್ರಕ್‍ಗಳು ಗಾಝಾ ಪ್ರವೇಶಿಸಿದ್ದು ಇನ್ನೂ 130 ಟ್ರಕ್‍ಗಳು ಜೋರ್ಡಾನ್, ಅಷ್ಡಾಡ್ ಮತ್ತು ಈಜಿಪ್ಟ್ ಮೂಲಕ ಬರುತ್ತಿವೆ. ಆದರೆ ಪ್ರಸ್ತುತ ಆಹಾರದ ಕೊರತೆಯನ್ನು ನೀಗಿಸಲು ಇದು ಸಾಕಾಗದು ಎಂದು ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಗಳಿಗಾಗಿ ಡಬ್ಲ್ಯೂಎಫ್‍ಪಿಯ ನಿರ್ದೇಶಕ ಅಂಟೋನಿ ರೆನಾರ್ಡ್ ಹೇಳಿದ್ದಾರೆ. ಜುಲೈಯಲ್ಲಿ ಗಾಝಾದಲ್ಲಿ 5 ವರ್ಷದೊಳಗಿನ 24 ಮಕ್ಕಳು ಸೇರಿದಂತೆ ಅಪೌಷ್ಠಿಕತೆಗೆ ಸಂಬಂಧಿಸಿದ 63 ಸಾವು ಸಂಭವಿಸಿವೆ ಎಂದು ವಿಶ್ವ ಆಹಾರ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News