ಇಸ್ರೇಲ್ ಬಾಂಬ್ ದಾಳಿ ನಡುವೆ ಗಾಝಾದ ಅಲ್-ಅಖ್ಸಾ ಆಸ್ಪತ್ರೆಯ ನೂರಾರು ರೋಗಿಗಳು, ಸಿಬ್ಬಂದಿ ನಾಪತ್ತೆ: ವಿಶ್ವ ಆರೋಗ್ಯ ಸಂಸ್ಥೆ
ಸಾಂದರ್ಭಿಕ ಚಿತ್ರ (PTI)
ಗಾಝಾ: ಗಾಝಾದ ಅಲ್-ಅಖ್ಸಾ ಆಸ್ಪತ್ರೆಯಿಂದ ನೂರಾರು ರೋಗಿಗಳು ಮತ್ತು ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ಹಾಗೂ ಸುಮಾರು 600 ರೋಗಿಗಳನ್ನು ಅಜ್ಞಾತ ಸ್ಥಳಗಳಿಗೆ ತೆರಳುವಂತೆ ಮಾಡಲಾಗಿದೆ ಅವರೆಲ್ಲಿದ್ದಾರೆಂಬ ಮಾಹಿತಿಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಸಂಸ್ಥೆ ಹೇಳಿವೆ. ಸದ್ಯ ಈ ಆಸ್ಪತ್ರೆಯಲ್ಲಿ ಕೇವಲ ಐದು ಮಂದಿ ವೈದ್ಯರು ರೋಗಿಗಳ ಆರೈಕೆ ಮಾಡುತ್ತಿದ್ದಾರೆ.
ಆಸ್ಪತ್ರೆಗೆ ಬರುತ್ತಿರುವ ಗಾಯಾಳುಗಳು ಸಂಖ್ಯೆ ಹೆಚ್ಚಾಗಿರುವ ನಡುವೆ ಸಿಬ್ಬಂದಿಗಳ ತೀವ್ರ ಕೊರತೆಯಿಂದಾಗಿ ಇಲ್ಲಿ ಸದ್ಯ ಇರುವ ವೈದ್ಯಕೀಯ ಸಿಬ್ಬಂದಿ ಇಸ್ರೇಲ್‌ನ ಸತತ ದಾಳಿಗಳ ನಡುವೆ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಹರಸಾಹಸ ಮಡುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಸಂಸ್ಥೆಯ ಅಧಿಕಾರಿಗಳ ಕೇಂದ್ರ ಗಾಝಾದ ಡೇರ್-ಎಲ್-ಬಲಾಹ್‌ದಲ್ಲಿರುವ ಏಕೈಕ ಕಾರ್ಯನಿರ್ವಹಿಸುವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ದಾಳಿಗಳು ವ್ಯಾಪಕವಾಗಿರುವುದು ಹಾಗೂ ಈ ಪ್ರದೇಶದಿಂದ ತೆರಳುವಂತೆ ಸೂಚನೆ ದೊರಕಿರುವುದರಿಂದ ಹೆಚ್ಚಿನ ಆರೋಗ್ಯ ಸಿಬ್ಬಂದಿ ಹಾಗೂ 6೦೦ ರೋಗಿಗಳು ಉಪಾಯವಿಲ್ಲದೆ ಅಜ್ಞಾತ ಸ್ಥಳಗಳಿಗೆ ತೆರಳುವಂತಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ.
ನೆಲದ ತುಂಬಾ ರಕ್ತದ ಕಲೆಗಳಿದ್ದು ರೋಗಿಗಳು ಎಲ್ಲೆಡೆ ನೆಲದಲ್ಲಿಯೇ ಮಲಗಿರುವುದನ್ನು ತಮ್ಮ ಸಿಬ್ಬಂದಿ ನೋಡಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಘೆಬ್ರೆಯೆಸುಸ್ ಹೇಳಿದ್ದಾರೆ.
ಈ ಆಸ್ಪತ್ರೆಗೆ ತುರ್ತು ವೈದ್ಯಕೀಯ ಸಿಬ್ಬಂದಿಯನ್ನು ಒದಗುಇಸುವ ಕುರಿತೂ ವಿಶ್ವ ಆರೋಗ್ಯ ಸಂಸ್ಥೆ ಯೋಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 7ರಿಂದ ಗಾಝಾದ ಮೇಲೆ ಇಸ್ರೇಲ್ ದಾಳಿಗಳಿಂದ 9600 ಮಕ್ಕಳೂ ಸೇರಿದಂತೆ 22,835ಗೂ ಅಧಿಕ ಜನರು ಬಲಿಯಾಗಿದ್ದಾರೆ.