ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದೇನೆ : ಅವಾಮಿಲೀಗ್‌ನಿಂದ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾರ ಧ್ವನಿಮುದ್ರಿತ ಹೇಳಿಕೆ ಪ್ರಸಾರ
ಶೇಖ್ ಹಸೀನಾ (Photo:PTI)
ಹೊಸದಿಲ್ಲಿ: ಕಳೆದ ಆಗಸ್ಟ್‌ನಲ್ಲಿ ನಡೆದ ಜನತಾದಂಗೆಯ ಸಂದರ್ಭ ತಾನು ಹಾಗೂ ತನ್ನ ಸಹೋದರಿ ರೆಹನಾ ದೇಶದಿಂದ ಪಲಾಯನಗೈದ ಸಂದರ್ಭ ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾಗಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾರ ಧ್ವನಿಮುದ್ರಿತ ಹೇಳಿಕೆಯನ್ನು, ಅವರ ಪಕ್ಷವಾದ ಅವಾಮಿ ಲೀಗ್ ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದೆ.
ತನ್ನ ಪ್ರಾಣ ಉಳಿದಿದ್ದಕ್ಕಾಗಿ ಅಲ್ಲಾಹುವಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ 77 ವರ್ಷದ ಹಸೀನಾ ಅವರು ಧ್ವನಿಮುದ್ರಿತ ಸಂದೇಶದಲ್ಲಿ ಗದ್ಗದಿತರಾಗಿ ಹೇಳಿದ್ದಾರೆ. ತನ್ನ ರಾಜಕೀಯ ವಿರೋಧಿಗಳು ತನ್ನನ್ನು ಕೊಲೆಗೈಯಲು ಸಂಚು ಹೂಡಿದ್ದಾರೆಂದು ಆಪಾದಿಸಿದ್ದಾರೆ.
ಕೇವಲ 20-25 ನಿಮಿಷಗಳ ಅಂತರದಲ್ಲಿ ರೆಹನಾ ಹಾಗೂ ನಾನು ಸಾವಿನ ದವಡೆಯಿಂದ ಪಾರಾಗಿದ್ದೇವೆ. ತನ್ನ ಹತ್ಯೆಗೆ ಸಂಚು ನಡೆದಿದ್ದುದು ಇದು ಮೊದಲೇನಲ್ಲವೆಂದು ಹೇಳಿರುವ ಅವರು ತನ್ನನ್ನು ಕೊಲ್ಲಲು ಹಲವು ಸಲ ಪ್ರಯತ್ನಗಳು ನಡೆದಿರುವುದಾಗಿ ಅವರು ಆಪಾದಿಸಿದರು.
‘‘2000ನೇ ಇಸವಿಯಲ್ಲಿ ಕೋಟಾಲಿಪಾರಾದಲ್ಲಿ ನಡೆದ ಭಾರೀ ಬಾಂಬ್ ಸ್ಪೋಟದಲ್ಲಿ ಪಾರಾಗಿದ್ದುದು ಅಥವಾ 2024ರ ಆಗಸ್ಟ್ 5ರಂದು ಹತ್ಯಾಯತ್ನದಲ್ಲಿ ನಾನು ಬದುಕುಳಿದಿರುವುದು ಅಲ್ಲಾಹುವಿನ ಇಚ್ಚೆಯಾಗಿದೆ. ಇಲ್ಲದೆ ಇದ್ದಲ್ಲಿ ತಾನು ಖಂಡಿತವಾಗಿಯೂ ಉಳಿಯುತ್ತಿರಲಿಲ್ಲ. ಅವರು (ರಾಜಕೀಯ ವಿರೋಧಿಗಳು) ನನ್ನನ್ನು ಕೊಲ್ಲಲು ಹೇಗೆ ಸಂಚು ಹೂಡಿದ್ದರೆಂಬುದನ್ನು ನೀವು ಆನಂತರ ಕಂಡಿದ್ದೀರಿ ಎಂದು ಹಸೀನಾ ಧ್ವನಿಮುದ್ರಿತ ಸಂದೇಶದಲ್ಲಿ ಹೇಳಿದ್ದಾರೆ. ನಾನು ಈಗಲೂ ಬದುಕುಳಿದಿದ್ದೇನೆ. ಯಾಕೆಂದರೆ ನನ್ನಿಂದ ಇನ್ನೂ ಹೆಚ್ಚಿನ ಕಾರ್ಯವಾಗಬೇಕೆಂಬುದು ಅಲ್ಲಾಹು ಬಯಸುತ್ತಿದ್ದಾನೆ ’’ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ತನ್ನ ದೇಶಭ್ರಷ್ಟ ಬದುಕಿನ ಬಗ್ಗೆ ಭಾವುಕರಾಗಿ ಮಾತನಾಡಿದ ಹಸೀನಾ ಅವರು, ‘‘ನಾನು ದೇಶವಿಲ್ಲದೆ, ಮನೆಯಿಲ್ಲದೆ ಯಾತನೆಗೀಡಾಗಿದ್ದಾನೆ. ಎಲ್ಲವೂ ಸುಟ್ಟುಹೋಗಿದೆ ’’ ಎಂದು ಅವರು ವಿಷಾದದಿಂದ ಹೇಳಿದ್ದಾರೆ.
ಕಳೆದ ವರ್ಷ ತನ್ನ ಪದಚ್ಯುತಿಗಾಗಿ ಬಾಂಗ್ಲಾದಲ್ಲಿ ನಡೆದ ದಂಗೆಯಲ್ಲಿ 600ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ ನೂರಾರು ಮಂದಿ ಗಾಯಗೊಂಡಿದ್ದಾರೆಂದು ಆಕೆ ಹೇಳಿದ್ದಾರೆ.