ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ: ಟ್ರಂಪ್ ಪುನರುಚ್ಚಾರ
ಡೊನಾಲ್ಡ್ ಟ್ರಂಪ್ | PTI
ಹೊಸದಿಲ್ಲಿ,ಆ.9: ಆಪರೇಶನ್ ಸಿಂಧೂರ್ ಬಳಿಕ ‘ಅಣ್ವಸ್ತ್ರ ಸಮರ’ವಾಗಿ ಮಾರ್ಪಾಡಬಹುದಾಗಿದ್ದ ನಾಲ್ಕು ದಿನಗಳ ಭಾರತ-ಪಾಕ್ ಸಂಘರ್ಷವನ್ನು ನಿಲ್ಲಿಸಿದ್ದು ತಾನೇ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪುನರುಚ್ಚರಿಸಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತ ಉಪಖಂಡದಲ್ಲಿರುವ ಈ ಎರಡು ನೆರೆಹೊರೆಯ ರಾಷ್ಟ್ರಗಳ ನಡುವೆ ನಡೆದ ಘರ್ಷಣೆಯ ವೇಳೆ 5 ಅಥವಾ 6 ವಿಮಾನಗಳನ್ನು ಹೊಡೆದುರುಳಿಸಲಾಗಿತ್ತೆಂದು ಟ್ರಂಪ್ ತಿಳಿಸಿದರು.
ಆದರೆ ಈ ವಿಮಾನಗಳು ಒಂದೇ ದೇಶದ್ದೇ ಅಥವಾ ಎರಡೂ ದೇಶಗಳದ್ದೇ ಎಂಬ ಬಗ್ಗೆ ಅವರು ವಿವರಣೆ ನೀಡಿಲ್ಲ.
ಆದರೆ ಕದನವಿರಾಮ ಏರ್ಪಡಿಸಿದ್ದು ತಾನೇ ಎಂಬ ಟ್ರಂಪ್ ವಾದವನ್ನು ಭಾರತ ಅಲ್ಲಗಳೆದಿದೆ. ಪಾಕ್ ಸೇನಾಧಿಕಾರಿಗಳ ಜೊತೆ ನೇರವಾಗಿ ಮಾತುಕತೆ ನಡೆಸಿದ ಬಳಿಕ ಉಭಯದೇಶಗಳು ಸಂಘರ್ಷವನ್ನು ಕೊನೆಗೊಳಿಸಿದ್ದವು ಎಂದು ಭಾರತವು ಹೇಳಿದೆ.
ಅಮೆರಿಕ ಮಧ್ಯಸ್ಥಿಕೆಯಲ್ಲಿ ಅಝರ್ ಬೈಝಾನ್ ಅಧ್ಯಕ್ಷ ಇಲ್ಹಾಮ್ ಅಲಿಯೇವ್ ಹಾಗೂ ಅರ್ಮೇನಿಯ ಪ್ರಧಾನಿ ನಿಕೊಲ್ ಪಾಶಿನಿಯಾನ್ ನಡುವೆ ಏರ್ಪಟ್ಟ ಶಾಂತಿ ಒಪ್ಪಂದಕ್ಕೆ ತ್ರಿಪಕ್ಷೀಯ ಅಂಕಿತ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
‘‘ ಅಮೆರಿಕ ಅಧ್ಯಕ್ಷನಾಗಿ ಜಗತ್ತಿನಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಸ್ಥಾಪಿಸುವುದೇ ನನ್ನ ಅತಿ ದೊಡ್ಡ ಹಂಬಲವಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಕದನವಿರಾಮವನ್ನು ಏರ್ಪಡಿಸುವಲ್ಲಿ ನಾವು ಯಶಸ್ಸು ಸಾಧಿಸಿದ ನಂತರ ಅಝರ್ ಬೈಜಾನ್ ಹಾಗೂ ಆರ್ಮೇನಿಯ ನಡುವೆ ಶಾಂತಿ ಒಪ್ಪಂದಕ್ಕೆ ಸಹಿಹಾಕಲಾಗಿದೆ ’’ ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ.
ತಾನು ವ್ಯಾಪಾರದ ಮೂಲಕವೇ ಸಂಘರ್ಷಗಳನ್ನು ಇತ್ಯರ್ಥಪಡಿಸುತ್ತಿದ್ದೇನೆ ಎಂದು ಹೇಳಿದ ಅವರು, ‘‘ತಮ್ಮನ್ನು ತಾವೇ ಸ್ಫೋಟಿಸಿಕೊಳ್ಳುವುದು ಮಾತ್ರವಲ್ಲದೆ ಇಡೀ ಜಗತ್ತನ್ನೇ ಸ್ಫೋಟಿಸಲು ಯತ್ನಿಸುವ ಅಣ್ವಸ್ತ್ರ ಶಕ್ತ ದೇಶಗಳ ಜೊತೆ ವ್ಯವಹರಿಸಲು ನಾನು ಬಯಸುವುದಿಲ್ಲ ’’ ಎಂದರು.
ಈ ಕಾರ್ಯಕ್ರಮದಲ್ಲಿ ಟ್ರಂಪ್ ಅವರು ಭಾರತ ಹಾಗೂ ಪಾಕ್ ನಡುವಿನ ಸಂಘರ್ಷವನ್ನು ಎರಡು ಸಲ ಉಲ್ಲೇಖಿಸಿದ್ದರು. ಈ ಹಿಂದೆಯೂ ಟ್ರಂಪ್ ಅವರು 30ಕ್ಕೂ ಅಧಿಕ ಸಂದರ್ಭಗಳಲ್ಲಿ ಭಾರತ-ಪಾಕ್ ಕದನವಿರಾಮವನ್ನು ತಾನೇ ಏರ್ಪಡಿಸಿದ್ದು ಎಂದು ಹೇಳಿದ್ದರು