ದೇಶ ಬಿಟ್ಟು ತೆರಳುವಂತೆ ಇಮ್ರಾನ್ ಖಾನ್‍ಗೆ ಒತ್ತಡ: ಪಿಟಿಐ ನಾಯಕರ ಹೇಳಿಕೆ
ಇಮ್ರಾನ್ ಖಾನ್ | Photo Credit : PTI
ಲಾಹೋರ್: ಲಾಹೋರ್ ನ ಅಡಿಯಾಲಾ ಜೈಲಿನಲ್ಲಿರುವ ಪಕ್ಷದ ಸ್ಥಾಪಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಬದುಕಿರುವ ಬಗ್ಗೆ ಮಾಹಿತಿಯಿದೆ. ಆದರೆ ಸುಮಾರು ಒಂದು ತಿಂಗಳಿನಿಂದ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು ಕುಟುಂಬದವರು, ವಕೀಲರು ಅಥವಾ ಪಕ್ಷದ ಹಿರಿಯ ನಾಯಕರ ಭೇಟಿಗೂ ಜೈಲಿನ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಸಂಸದ್ ಸದಸ್ಯ ಖುರ್ರಂ ಝೀಷನ್ ಶನಿವಾರ ಹೇಳಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಪ್ರತ್ಯೇಕವಾಗಿ ಇರಿಸಿರುವುದು ಸಂಪೂರ್ಣ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ತಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಅಧಿಕಾರಿಗಳು ಇಮ್ರಾನ್ ಖಾನ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಮ್ರಾನ್ ಜೀವಂತವಾಗಿದ್ದಾರೆ ಮತ್ತು ಅಡಿಯಾಲಾ ಜೈಲಿನಲ್ಲಿಯೇ ಆರೋಗ್ಯವಾಗಿದ್ದಾರೆಂದು ಕಳೆದ ಕೆಲ ದಿನಗಳಿಂದ ನಮಗೆ ಭರವಸೆ ನೀಡಲಾಗಿದೆ ಎಂದು ಝೀಷನ್‍ರನ್ನು ಉಲ್ಲೇಖಿಸಿ ಎಎನ್‍ಐ ವರದಿ ಮಾಡಿದೆ. ` ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಷರೀಫ್ ನೇತೃತ್ವದ ಸರಕಾರ ಇಮ್ರಾನ್ ಖಾನ್ ಎದುರು ಕೆಲವು ಷರತ್ತುಗಳನ್ನು ಇರಿಸಿದ್ದು ಒಪ್ಪಂದ ಮಾಡಿಕೊಳ್ಳಲು ಬಯಸಿದೆ. ದೇಶ ಬಿಟ್ಟು ತೆರಳಿದರೆ ಮತ್ತು ತಮ್ಮ ಆಯ್ಕೆಯ ಪ್ರದೇಶದಲ್ಲಿ ಮೌನವಾಗಿದ್ದರೆ ಕೆಲವು ರಿಯಾಯಿತಿಗಳ ಭರವಸೆ ನೀಡಿದ್ದಾರೆ. ಆದರೆ ಇಮ್ರಾನ್ ಎಂದಿಗೂ ಇದಕ್ಕೆ ಒಪ್ಪುವುದಿಲ್ಲ ಎಂಬುದು ನಮಗೆ ತಿಳಿದಿದೆ' ಎಂದವರು ಹೇಳಿದ್ದಾರೆ.
ಇಮ್ರಾನ್ ಒಪ್ಪದ ಕಾರಣ ಅವರನ್ನು ಪ್ರತ್ಯೇಕವಾಗಿರಿಸಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಹೊರ ಜಗತ್ತಿನ ಸಂಪರ್ಕವನ್ನೇ ಕಡಿತಗೊಳಿಸಲಾಗಿದ್ದು ಯಾರನ್ನೂ ಸಂಪರ್ಕಿಸಲು ಅವಕಾಶ ನೀಡುತ್ತಿಲ್ಲ. ನಿರಂತರ ಒತ್ತಡದ ಮೂಲಕ ತಮ್ಮ ಷರತ್ತನ್ನು ಒಪ್ಪಿಕೊಳ್ಳುವಂತೆ ಮಾಡುವುದು ಸರಕಾರದ ಹುನ್ನಾರವಾಗಿದೆ ಎಂದು ಜೀಷನ್ ಹೇಳಿದ್ದಾರೆ.